ಅಂದು ನಂ.1 ಉದ್ಯಾನ : ಇಂದು ಕೇಳುವವರಿಲ್ಲಾ ಇದರ ಅಧ್ವಾನ..!

 

ಮೈಸೂರು, ಜೂ.28, 2020 : (www.justkannada.in news ) : ಒಂದು ಕಾಲದಲ್ಲಿ ಮೈಸೂರಿನ ನಂಬರ್ ಒನ್ ಉದ್ಯಾನವನವೆಂದು ಹೆಸರು ಪಡೆದಿದ್ದ ಪಾರ್ಕ್ ಇದೀಗ ಸೂಕ್ತ ನಿರ್ವಹಣೆ ಕೊರತೆಯಿಂದ ಅಧ್ವಾನಗೊಂಡಿದೆ.

ಯಾವುದೇ ಬಡಾವಣೆ ನಿರ್ಮಿಸುವ ವೇಳೆ ನಿವಾಸಿಗಳ ಅನುಕೂಲಕ್ಕಾಗಿ ಪಾರ್ಕ್ ಗಳಿಗೆ ಜಾಗ ಮೀಸಲಿಟ್ಟು ಆ ಮೂಲಕ ಲಂಗ್ ಸ್ಪೇಸ್ ಕಾಯ್ದುಕೊಳ್ಳಲಾಗುತ್ತದೆ. ಇದೇ ರೀತಿ ಮೈಸೂರಿನ ವಾರ್ಡ್ ನಂ. 45 ರಲ್ಲಿನ ನ್ಯೂ ಕಾಂತರಾಜೇ ಅರಸ್ ರಸ್ತೆಯ ಬದಿಯಲ್ಲಿರುವ ಶಾರದದೇವಿ ನಗರದ ಉದ್ಯಾನವನ ಸಹ ಅರಂಭದಲ್ಲಿ ಉತ್ತಮ ನಿರ್ವಹಣೆ ಕಾರಣದಿಂದ ಜನಮೆಚ್ಚುಗೆ ಪಡೆದಿತ್ತು. ಆದರೆ ಇದೀಗ, ಸೂಕ್ತ ನಿರ್ವಹಣೆ ಕೊರತೆಯಿಂದ ಉದ್ಯಾನವನ ಅಧ್ವಾನವನವಾಗಿದೆ.

ಈ ಹಿಂದೆ,  ದಸರ ಮಹೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ನಂಬರ್ ಒನ್ ಪಾರ್ಕ್ ಎಂಬ ಹೆಸರು ಪಡೆಯುತ್ತಿದ್ದ ಈ ಉದ್ಯಾನವನದ ಸ್ಥಿತಿ ಈಗ ಶೋಚನೀಯವಾಗಿದೆ. ಅಂದಾಜು 7 ಎಕರೆ ವಿಸ್ತೀರ್ಣದ ಈ ಪಾರ್ಕ್ ವರ್ಷಗಳ ಹಿಂದೆ ಹಂತಹಂತವಾಗಿ ಅಭಿವೃದ್ಧಿ ಹೊಂದಿತು. ಮಕ್ಕಳ ಆಟಿಕೆ, ಯುವಕರಿಗೆ ವ್ಯಾಯಾಮ, ಸಂಗೀತ ಕಾರಂಜಿ.. ಮುಂತಾದ ಮೂಲಸವಲತ್ತುಗಳನ್ನು ಪರಿಚಯಿಸಲಾಯಿತು. ಇದರಿಂದ ಆಕರ್ಷಿತರಾದ ಬಡಾವಣೆ ಜನತೆ ನಿತ್ಯ ಉದ್ಯಾನವನಕ್ಕೆ ಭೇಟಿ ನೀಡಲು ಆರಂಭಿಸಿದರು.

Mysore-park-sharadaevi-nagara-no-maintains-mcc

ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆಂದೇ ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಹಸಿರು ವಾತಾವರಣದಲ್ಲಿ ವಿಹಾರ ನಡೆಸುವ ಮೂಲಕ ಮನಸ್ಸಿನ ಉಲ್ಲಾಸದ ಜತೆಗೆ ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದರು.

ಆದರೆ ಈಗ ಇದೆಲ್ಲಾ ಹಳೇಯ ಕಥೆ ಎಂಬಂತಾಗಿದೆ. ಉದ್ಯಾನವನದಲ್ಲಿ ಹಸಿರು ಮಾಯವಾಗಿದೆ. ಆಟಿಕೆ, ವ್ಯಾಯಾಮದ ಉಪಕರಣಗಳು ಕೆಟ್ಟು ನಿಂತಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಅದೇ ರೀತಿ ಬೆಳಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಿಗಳ ಕಿವಿಗೆ ಇಂಪು ನೀಡುತ್ತಿದ್ದ ರೇಡಿಯೋ ಧ್ವನಿ ಸಹ ನಿಂತು ಹೋಗಿದೆ. ಧ್ವನಿ ವರ್ಧಕಗಳು ರಿಪೇರಿಗೆ ಬಂದು ತಿಂಗಳುಗಳೇ ಕಳೆದರು ಅದು ಇನ್ನು ದುರಸ್ತಿ ಭಾಗ್ಯ ಕಂಡಿಲ್ಲ. ಸ್ಪೀಕರ್ ಗಳಿಗೆ ಅಳವಡಿಸಿದ್ದ ಬಲ್ಬ್ ಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ. ನಿರ್ವಹಣೆ ಇಲ್ಲದ ಕಾರಣ ವೈಯರ್ ಗಳು ಹೊರ ಬಂದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ಪಾರ್ಕ್ ಗೆ ಆಗಮಿಸುವವರ ವಾಹನಗಳ ಕಳ್ಳತನ ಸಹ ವರದಿಯಾಗಿದೆ. ಪಾರ್ಕ್ ಪ್ರವೇಶದ್ವಾರದಲ್ಲಿ ಸಿಸಿಟಿವಿ ಇದ್ದರೂ ಪ್ರಯೋಜಕ್ಕೆ ಬಾರದಂತಾಗಿದೆ. ಮನಸ್ಸಿನ ತಳಮಳ ಕಡಿಮೆ ಮಾಡಿಕೊಳ್ಳಲು ಪಾರ್ಕ್ ಗೆ ಆಗಮಿಸುತ್ತಿದ್ದವರು, ಈಗ ಪಾರ್ಕ್ ಗೆ ಬಂದರೆ ಟೆನ್ಷನ್ ಎಂಬಂತ ಸ್ಥಿತಿ ನಿರ್ಮಾಣವಾಗಿದೆ.

Mysore-park-sharadaevi-nagara-no-maintains-mcc

ಲಾನ್ ಜಾಗದಲ್ಲಿ ಹೆಚ್ಚಾಗಿ ಗರಿಕೆ ಹುಲ್ಲೇ ಬೆಳೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಗರಿಕೆ ಹುಲ್ಲು ಬೇಗ ಬೆಳೆಯುವುದರಿಂದ ಅಲ್ಲಿ ವಿಷಜಂತುಗಳು ಸೇರಿಕೊಳ್ಳಬಹುದು ಎಂಬುದು ನಿವಾಸಿಗಳ ಆತಂಕ. ಉಧ್ಯಾನವನದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಗಡಿಯಾರ ಕೆಟ್ಟು ನಿಂದು ವರ್ಷ ಕಳೆದಿದೆ. ಆದರೂ ಅದನ್ನು ದುರಸ್ತಿಗೊಳಿಸಲು ಸಾಧ್ಯವಾಗಿಲ್ಲ.

ವಾರ್ಡ್ ನ ಹಿಂದಿನ ಪಾಲಿಕೆ ಸದಸ್ಯ ಜೆ.ಎಸ್.ಜಗದೀಶ್ ಅವರ ಕಾಳಜಿ ಕಾರಣ ವರ್ಷಗಳ ಹಿಂದೆ ಈ ಪಾರ್ಕ್ ಅಭಿವೃದ್ಧಿ ಹೊಂದಿತ್ತು. ಖುದ್ದು ಬೆಳಗ್ಗೆ, ಸಂಜೆ ಪಾರ್ಕ್ ಗೆ ತೆರಳಿ ಅಲ್ಲಿನ ನಿರ್ವಹಣೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಆ ಮೂಲಕ ಬಡಾವಣೆಗೊಂದು ಉತ್ತಮ ಉದ್ಯಾನವನ ಕೊಡುಗೆ ನೀಡಿದ್ದರು. ಆದ್ದರಿಂದಲೇ ದಸರ ಫಲಪುಷ್ಪ ಪ್ರದರ್ಶಗಳಲ್ಲಿ ನಂಬರ್ ಒನ್ ಪಾರ್ಕ್ ಎಂಬ ಹೆಸರು ಪಡೆದಿತ್ತು. ಹೀಗೆ ವರ್ಷಗಳ ಹಿಂದೆ ಅಭಿವೃದ್ಧಿ ಪರ್ವ ಕಂಡಿದ್ದ ಪಾರ್ಕ್ ಈಗ ಅಧ್ವಾನಗೊಂಡಿರುವುದಕ್ಕೆ ಯಾರು ಹೊಣೆ..?

oooo

key words : Mysore-park-sharadaevi-nagara-no-maintains-mcc