ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

 

ಮೈಸೂರು, ಜೂ.16, 2019 : (www.justkannada.in news) : ದೇವರಾಜ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ತಪ್ಪಾಗಿ ಅರ್ಥಸಿಕೊಂಡು ವರದಿ ಮಾಡಿದ್ದ ಮಾಧ್ಯಮಗಳಿಗೆ ನಿನ್ನೆಯಷ್ಟೆ ಯದುವೀರ್ ಮಂಗಳಾರತಿ ಮಾಡಿದ್ದರು. ಇಂದು ಮುಂಜಾನೆ ದಿಢೀರನೆ ಪತ್ನಿ ಸಮೇತ ಅದೇ ದೇವರಾಜ ಮಾರುಕಟ್ಟೆಗೆ ಆಗಮಿಸಿದಾಗ ವ್ಯಾಪಾರಿಗಳಿಗೆ ಶಾಕ್..

ಹೌದು, ಭಾನುವಾರ ಬೆಳಗ್ಗೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ಸಂಚಲನ. ಕಾರಣ ರಾಜವಂಶಸ್ಥ ಯದುವೀರ್, ಮಡದಿ ತ್ರಿಷಿಕ ಸಮೇತ ಮಾರುಕಟ್ಟೆಗೆ ಆಗಮಿಸಿದ್ದರು. ಮಾರುಕಟ್ಟೆಯನ್ನು ಒಂದು ಸುತ್ತು ಹಾಕಿ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿದರು. ದಂಪತಿ ಮಾರುಕಟ್ಟೆಯಲ್ಲಿ ಸಾಗುತ್ತಿದ್ದರೆ ವ್ಯಾಪಾರಿಗಳು ಸ್ವಪ್ರೇರಣೆಯಿಂದ ಎದ್ದು ನಿಂತು ಗೌರವ ತೋರಿಸಿದ್ದು ವಿಶೇಷವಾಗಿತ್ತು.

ಇದೇ ವೇಳೆ ತ್ರಿಷಿಕ, ಮಾರುಕಟ್ಟೆಯಲ್ಲಿ ತಾಜ ತರಕಾರಿ, ಸೊಪ್ಪುಗಳನ್ನು ಖರೀದಿಸಿದರು. ಜತೆಗೆ ನೇರಳೆ ಹಣ್ಣು, ನಂಜನಗೂಡಿನ ರಸಬಾಳೆಯನ್ನು ಖರೀದಿಸಿದರು. ತ್ರಿಷಿಕಾ, ಮಾರುಕಟ್ಟೆಯಲ್ಲಿ ಖರೀದಿಗೆ ಮುಂದಾದಾಗ ವ್ಯಾಪಾರಿಗಳು ದುಡ್ಡು ಪಡೆಯಲು ಹಿಂದೇಟು ಹಾಕಿದರು. ಕೈ ಮುಗಿದು ಹಣವನ್ನು ನಯವಾಗಿ ನಿರಾಕರಿಸಿದರು. ಆದರೆ ಇದಕ್ಕೆ ಬಗ್ಗದ ದಂಪತಿ, ಬಲವಂತವಾಗಿಯೇ ಹಣ ನೀಡಿ ತರಕಾರಿ, ಸೊಪ್ಪು, ಹಣ್ಣುಗಳನ್ನು ಖರೀದಿಸಿದರು.

ಮೈಸೂರ್ ಪಾಕ್ ಖರೀದಿಸಿ ಮಹಾರಾಜ :

ದೇವರಾಜ ಮಾರುಕಟ್ಟೆಯಲ್ಲಿ ಸುತ್ತುಹಾಕಿ ವ್ಯಾಪಾರ ಮುಗಿಸಿಕೊಂಡು ಹೊರ ಬಂದ ಯದುವೀರ್, ನೇರವಾಗಿ ಗುರು ಸ್ವೀಟ್ ಮಾರ್ಟ್ ಗೆ ಭೇಟಿ ನೀಡಿದರು. ಅಲ್ಲಿ ದೊರಕುವ ಪ್ರಸಿದ್ಧ ಮೈಸೂರ್ ಪಾಕ್ ಖರೀದಿಸಿದರು. ನಂತರ ಕಾರಿನ ಬಳಿ ತೆರಳಿದಾಗ ಮಾರುಕಟ್ಟೆ ಸಮೀಪ ನೆರದಿದ್ದ ಅನೇಕರು ಆಗಮಿಸಿ ಯದುವೀರ್ ಕಾಲಿಗೆ ನಮಸ್ಕರಿಸಿದರು.


the scion of mysore, yaduveer and his wife trishika suddenly arrived today at mysore devaraja market. by seeing this royal couple, vendors were astonished.