ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ:‘ಕೈ’ ಅಭ್ಯರ್ಥಿ ಮಧು ಮಾದೇಗೌಡರನ್ನ ಗೆಲ್ಲಿಸುವಂತೆ ಕಾಂಗ್ರೆಸ್ ನಾಯಕರಿಂದ ಮನವಿ.

 

ಮೈಸೂರು,ಜೂನ್,9,2022(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡರಿಗೆ ಮತ ನೀಡಿ ಗೆಲ್ಲಿಸುವಂತೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ , ಕೃಷ್ಣ ಬೈರೇಗೌಡ ಸೇರಿ ಹಲವು ಕಾಂಗ್ರೆಸ್ ನಾಯಕರು ಮನವಿ ಮಾಡಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಶಾಸಕರುಗಳಾದ ಎಂ ಬಿ ಪಾಟೀಲ್, ಕೃಷ್ಣ ಭೈರೆಗೌಡ, ರಿಜ್ವಾನ್ ಹರ್ಷದ್,  ಎಚ್ ಪಿ ಮಂಜುನಾಥ್, ಯತೀಂದ್ರ, ಅನೀಲ್ ಚಿಕ್ಕಮಾದು, ಸೇರಿ ಹಲವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಈ ವೇಳೆ ಮಾತನಾಡಿದ ಎಂ.ಬಿ ಪಾಟೀಲ್, ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ‌. ದಕ್ಷಿಣ ಪದವೀಧರ ಕ್ಷೇತ್ರ ಅಭ್ಯರ್ಥಿ ಆಗಿ ಮಧು ಜಿ ಮಾದೇಗೌಡ ಕಣಕ್ಕಿಳಿಸಿದೆ. ಮಧು ಅವರ ತಂದೆ ಮಾದೇಗೌಡ ಕಾವೇರಿ ಕಣಿಯ ರೈತರ ಪರ ಹೋರಾಟ ಮಾಡಿದವರು. ಅವರ ಮಗ ಮಧು ಮಾದೇಗೌಡ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಂತಹವರನ್ನ ಅಭ್ಯರ್ಥಿ ಮಾಡಿದೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಸಿಗುತ್ತಿಲ್ಲ.. ಯಾವುದೇ ಖಾಲಿ ಹುದ್ದೆಗಳು ಭರ್ತಿ ಆಗ್ತಾ ಇಲ್ಲ. ಪದವೀಧರರು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಹಲವರು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಾಕಷ್ಟು ಸಮಸ್ಯೆ ಇವೆ. ಇವರ ಆರ್ಥಿಕ ನೀತಿಯಿಂದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಧಾರ್ಮಿಕ ವಿಚಾರ ಕೆದಕಿ ಕೆಲಸ ಮಾಡುತ್ತಿದ್ದಾರೆ. ಈ ರಾಜ್ಯದ ಅಭಿವೃದ್ಧಿ ಆಗಬೇಕೆಂದಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ. ಇವತ್ತು ಶಿಕ್ಷಣ ಕ್ಷೇತ್ರದಿಂದ ಸಮಸ್ಯೆ ಬಗೆ ಹರಿಸಬೇಕಿದೆ. ಮಧು ಜಿ ಮಾದೇಗೌಡ ಪರವಾಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಮಾದೇಗೌಡ ನೇರ ನಿಷ್ಟೂರ ರಾಜಕಾರಣಿ. ಮಧು ಮಾದೇಗೌಡ ಕೂಡ ನಿಷ್ಠ, ಪ್ರಾಮಾಣಿಕ. ಹಾಗಾಗಿ ಎಲ್ಲಾ ಪದವೀಧರರಿಗೆ ಮನವಿ ಮಾಡ್ತೇವೆ. ಬಿಜೆಪಿ ಸರ್ಕಾರ ಸಾಧನೆ ಶೂನ್ಯ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಚುನಾವಣೆ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದಾರೆ. ಮತದಾರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಎಂ ಬಿ ಪಾಟೀಲ್ , ಪ್ರಧಾನಿ ನರೇಂದ್ರ ಮೋದಿ ಯುವಕರಲ್ಲಿ ಹಲವು ಕನಸು ಬಿತ್ತಿದ್ದರು. ಸಹಜವಾಗಿ ಎಲ್ಲರೂ ಅವರನ್ನು ನಂಬಿದ್ದರು. ಆದರೆ ಹೊಸ ಉದ್ಯೋಗ ಕೊಡುವುದಿರಲಿ. ಇರುವ ಉದ್ಯೋಗವನ್ನೇ ಕಳೆದುಕೊಂಡರು. ನೋಟ್ ಬ್ಯಾನ್ ತಪ್ಪು ಹೆಜ್ಜೆಯಿಂದ ಸಮಸ್ಯೆ. ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಭ್ರಷ್ಟಾಚಾರ ತೊಲಗಿಸಲು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು- ಕೃಷ್ಣ ಭೈರೆಗೌಡ

ಇದೇ ವೇಳೆ ಮಾತನಾಡಿದ ಕೃಷ್ಣ ಭೈರೆಗೌಡ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇರುವ ಮೂರು ಅಭ್ಯರ್ಥಿಗಳ ಪೈಕಿ ವಿದ್ಯಾವಂತ ಮತ್ತು ಯುವಕ. ಮಧು ಮಾದೇಗೌಡರಿಗೆ ಸಾಕಷ್ಟು ಜನ ಸೇವೆ, ಗ್ರಾಮಿಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ನಡೆಸಿ ಅನುಭವ ಇದೆ. ಸಾರ್ವಜನಿಕ ಸೇವೆಯ ಕುಟುಂಬದ ಹಿನ್ನೆಲೆ ಇದೆ. ಎಲ್ಲಾ ಅರ್ಹತೆ ಮಧು ಮಾದೇಗೌಡ ಹೊಂದಿದ್ದಾರೆ. ಅವರ ಗೆಲುವಿಗೆ ಪ್ರತಿ ನಾಯಕ, ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ.. ಅವರು ಗೆಲ್ಲುವ ವಿಶ್ವಾಸ ಇದೆ ಎಂದರು.

ಸರ್ಕಾರ ಉದ್ಯೋಗ ಕ್ಷೇತ್ರದಲ್ಲಿನ ಸೃಷ್ಟಿಸಿಕೊಂಡಿದ್ಧ ಉದ್ಯೋಗಿಗಳ ಉದ್ಯೋಗ ಕಿತ್ತುಕೊಂಡಿದೆ. ಶೇ. 30ರಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ವಿವೆ. ಇನ್ನು ಉದ್ಯೋಗ ಎಲ್ಲಿ ಸೃಷ್ಟಿಸಲು ಸಾಧ್ಯ. ಇದೆಲ್ಲ ಗಮನಿಸಿ. ಇದು ಪದವೀಧರ ಕ್ಷೇತ್ರ. ಭವಿಷ್ಯ ಭಾರತ ಕಟ್ಟುವ ಶಕ್ತಿ ಇರು ಪದವೀಧರ ಚಿಂತನೆ ಮಾಡಬೇಕು. ಇವತ್ತು ಎಲ್ಲದರ ವಿರುದ್ಧವಾಗಿ ಈ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ದಳದಿಂದಲೂ ಕೂಡ ನಾವೂ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಪದವೀಧರು ಮತ ನೀಡಬೇಕು. ಬಿಜೆಪಿ ಭ್ರಷ್ಟಾಚಾರ ತೊಲಗಿಸಲು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಶಾಸಕ‌ ರಿಜ್ವಾನ್ ಹರ್ಷದ್ ಮಾತನಾಡಿ,  ಹಿಂದೂ ಮುಸ್ಲಿಂ ದೇವಸ್ಥಾನ, ಮಸೀದಿ ಎನ್ನುವ ಚರ್ಚೆ‌ ಮಾಡುತ್ತಾ ಕೂತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಶೇ.ನಲವತ್ತರಷ್ಟು ಕಮಿಷನ್ ಹೊಡೆಯುವುದು ಮುಖ್ಯ. ಪಠ್ಯಪುಸ್ತಕ ದಲ್ಲಿ ಸಾಂಸ್ಕೃತಿಕ ಹರಣ ಮಾಡಿದ್ದಾರೆ. ಕುವೆಂಪು, ನಾರಾಯಣಗುರು, ಭಗತ್ ಸಿಂಗ್, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ.‌ ಸರ್ಕಾರಕ್ಕೆ ಪ್ರಶ್ನೆ ಮಾಡುವ ನೈತಿಕ ಹಕ್ಕು ನಮಗೆ  ಇದೆ. ಇಡೀ ಸಮಾಜ ಒಂದಾಗಿ ಬಿಜೆಪಿ ಅಭ್ಯರ್ಥಿ ಸೋಲಿಸಬೇಕು. ‌ ಬಿಜೆಪಿ ಹಿಡನ್ ಅಜೆಂಡಾ ವಿರುದ್ಧ ಸಮಾಜ ಇದೆ ಎನ್ನುವುದನ್ನು ಫಲಿತಾಂಶದ ಮೂಲಕ ಎಚ್ಚರಿಕೆ ಸಂದೇಶ ರವಾ‌ನಿಸಬೇಕು. ನಾರಾಯಣ ಗುರು ಅವರಿಗೆ ಪದೇ ಪದೇ ಅವಮಾನ ಮಾಡಿದ್ದಾರೆ. ಜಾತಿ ಧರ್ಮ ಪಕ್ಷಬೇಧ ಭಾವ ಬಿಟ್ಟು ಕೆಲಸ ಮಾಡಬೇಕು ಎಂದರು.

Key words: Southern –Graduate- Election-Congress leaders -request – Madhu Madhagowda-support