ಮತದಾನ ಬಹಿಷ್ಕಾರ: ಇವಿಎಂ, ಮೇಜು, ಕುರ್ಚಿ ಧ್ವಂಸ: ಪೊಲೀಸರ ಮೇಲೂ ಕಲ್ಲು ತೂರಿದ ಗ್ರಾಮಸ್ಥರು.

ಚಾಮರಾಜನಗರ,ಏಪ್ರಿಲ್,26,2024 (www.justkannada.in):  ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮತದಾನಕ್ಕೆ ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರು ಇವಿಎಂ ಮೇಜು ಕುರ್ಚಿಗಳನ್ನ ಧ್ವಂಸ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

ಮತದಾನ ಬಹಿಷ್ಕಾರ ಹಿನ್ನೆಲೆ, ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಮೂಲಭೂತ ಸೌಕರ್ಯ ಕೊರತೆ ಹಿನ್ನೆಲೆ ಇಂಡಿಗನತ್ತ ಗ್ರಾಮದ ಜನರು  ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು.

ಮತದಾನ ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರ ಮನ ವೊಲಿಸಲು ಅಧಿಕಾರಿಗಳು ಬಂದಿದ್ದರು. ತಹಸೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತದಾರರನ್ನು ಮನವೊಲಿಸಲು ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ‌ ನಡುವೆ ಮಾತಿನ ಚಕಮಕಿ ನಡೆದಿದ್ದು,  ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಇಂಡಿಗನತ್ತ ಗ್ರಾಮದ ನಿವಾಸಿಗಳು ಕಲ್ಲು ತೂರಿದ್ದಾರೆ ಎನ್ನಲಾಗಿದೆ.

ಮಾತಿನ‌ ಚಕಮಕಿ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆ ಗೆ ನುಗ್ಗಿದ ಪ್ರತಿಭಟನಾಕಾರರು. ವಿದ್ಯುನ್ಮಾನ ಯಂತ್ರ ನಾಶ ಪಡಿಸಿ ಮತಗಟ್ಟೆ ದ್ವಂಸ ಮಾಡಿದ್ದಾರೆ. ಕುರ್ಚಿ ಮೇಜು ಎಲ್ಲವನ್ನೂ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮಹಿಳೆಯರೊಬ್ಬರ ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಗಲಾಟೆ ಹಿನ್ನೆಲೆಯಲ್ಲಿ ಇಂಡಿಗನತ್ತ ಗ್ರಾಮದ ಮತಗಟ್ಟೆ ಯಲ್ಲಿ ಮತದಾನ ಸ್ಥಗಿತವಾಗಿದೆ.

ಮೂಲಭೂತ ಸೌಕರ್ಯ ಕೊರತೆ ಆರೋಪದ ಮೇಲೆ ಮಹದೇಶ್ವರಬೆಟ್ಡ ವ್ಯಾಪ್ತಿಯ ಐದು ಗ್ರಾಮಗಳಾದ ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗು ತುಳಸಿಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಹಾಕಲಾಗಿತ್ತು.

ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದಾರೆ. ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ವಿದ್ಯುತ್ ಆರೋಗ್ಯ, ಶಿಕ್ಷಣ ಸೌಲಭ್ಯ ಸರಿಯಾಗಿ ಇಲ್ಲದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮತದಾನ ಬಹಿಷ್ಕಾರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಈ ನಡುವೆ ಅಧಿಕಾರಿಗಳಿಂದ ಮನವೊಲಿಸುವ ಪ್ರಯತ್ನ ವಿಫಲವಾಗಿತ್ತು. ಈ ಬಾರಿ ಮತದಾನ ಮಾಡಲೇ ಬಾರದು ಎಂದು ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದರು.

Key words:  Voting, boycott, Chamarajanagar