ಸುಪ್ರೀಂಕೋರ್ಟ್ ನಲ್ಲಿ ತೀರ್ಪು ನಮ್ಮ ಪರ ಬರುವ ವಿಶ್ವಾಸ: ಕಾಂಗ್ರೆಸ್ ನಿಂದ ರಾಷ್ಟ್ರಪತಿಗೆ ದೂರು ವಿಚಾರ ಕುರಿತು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ಏನು ಗೊತ್ತೆ…?

ಮೈಸೂರು,ನ,11,2019(www.justkannada.in): ನಾಳಿದ್ದು ಸುಪ್ರೀಂ ಕೋರ್ಟ್ ನೀಡುವ ತೀರ್ಪು ಐತಿಹಾಸಿಕವಾಗಿರಲಿದ್ದು ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಲದರ್ಶನಿಯಲ್ಲಿ ಉಪಚುನಾವಣೆ ಸಂಬಂಧ ಹುಣಸೂರು ಬಿಜೆಪಿ ತಾಲ್ಲೂಕು ಅಧ್ಯಕ್ಷರು ಹಾಗೂ ಮುಖಂಡರ ಜೊತೆ ಹೆಚ್. ವಿಶ್ವನಾಥ್ ಸಭೆ ನಡೆಸಿ ಚರ್ಚಿಸಿದರು. ಹುಣಸೂರಿನಲ್ಲಿ ಸ್ಪರ್ಧೆ ಕುರಿತು  ಸಭೆಯಲ್ಲಿ ಬಿಜೆಪಿ ಮುಖಂಡರ ಅಭಿಪ್ರಾಯವನ್ನ ಹೆಚ್.ವಿ  ಸಂಗ್ರಹಿಸಿದರು.

ಸಭೆ ಬಳಿಕ ಮಾತನಾಡಿದ ಅನರ್ಹ ಶಾಸಕ ಹೆ.ಚ್.ವಿಶ್ವನಾಥ್ , ಜಿಲ್ಲಾ ಪದಾಧಿಕಾರಿ, ಹುಣಸೂರು ತಾಲ್ಲೂಕು ಬಿಜೆಪಿ ಅಧ್ಯಕ್ಷರ ಜೊತೆ ಇಂದು ಮಾತುಕತೆ ನಡೆಸಿದ್ದೇನೆ. ಯೋಗಾನಂದ್ ವಕೀಲ, ನಾನು ಕೂಡ ವಕೀಲ. ಇಬ್ಬರು ವಕೀಲರು ಕುಳಿತ ಮೇಲೆ ಸುದೀರ್ಘ ಮಾತುಕತೆ ನಡೆಯುವುದು ಸಾಮಾನ್ಯ ಎಂದರು.

ನಾಳಿದ್ದು ಸುಪ್ರೀಂ ಕೋರ್ಟ್ ನೀಡುವ ತೀರ್ಪು ಐತಿಹಾಸಿಕವಾಗಿರುತ್ತದೆ. ಇದು ರಾಜಕೀಯ ವಿಚಾರ, ರಾಜಕಾರಣವನ್ನೇ ಉಸಿರಾಗಿಸುವ ದೇಶದಲ್ಲಿ, ನ್ಯಾಯಾಲಯ ನೀಡುವ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಈ ಹಿಂದೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ರವರ ಸಂವಿಧಾನಕ್ಕೆ ವಿರುದ್ದವಾಗಿ, ಕಾನೂನಿಗೆ ವಿರುದ್ದವಾಗಿ ತೆಗೆದುಕೊಂಡಿರುವ ಆದೇಶದ ವಿರುದ್ದ ತೀರ್ಪು ಬರುತ್ತದೆ. ಸುಪ್ರೀಂ ಕೋರ್ಟ್ ನಮ್ಮ ಪರವೇ ತೀರ್ಪು ಕೊಡಲಿದೆ. ನಮಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ, ವಿಶ್ವಾಸವಿದೆ ಎಂದರು.

ಸಿಎಂ ಯಡಿಯೂರಪ್ಪ ಆಡಿಯೋ ಬಹಿರಂಗ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಈ ಬಗ್ಗೆ  ಕಾಂಗ್ರೆಸ್ ನವರು ರಾಷ್ಟ್ರಪತಿ ದೂರು ನೀಡಲಿ. ಕುಮಾರಸ್ವಾಮಿ ಲಾಯರ್ ಅಲ್ಲ, ಯಡಿಯೂರಪ್ಪ ಲಾಯರ್ ಅಲ್ಲ. ಸಿದ್ದರಾಮಯ್ಯ ಒಬ್ಬ ಲಾಯರ್ ಆಗೀರೋರು ಅವರಿಗೆ ಒಂದು ಸಿಡಿ ಎಷ್ಟರ ಮಟ್ಟಿಗೆ ಸಾಕ್ಷಿ ಆಗುತ್ತದೆ ಎನ್ನುವುದು ಗೊತ್ತಿರಬೇಕು. ಸಿಡಿ ಸಾಕ್ಷ್ಯವಾಗಿ ಉಳಿಯುತ್ತಾ, ಇಲ್ಲವಾ, ಅದನ್ನು ನ್ಯಾಯಾಲಯ ಯಾವ ರೀತಿ ಪರಿಗಣಿಸುತ್ತೇ ಅನ್ನೋದು ಅವರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

ಸಿ.ಪಿ ಯೋಗೇಶ್ವರ್ ಹುಣಸೂರು ಬೈ ಎಲೆಕ್ಷನ್ ಅಭ್ಯರ್ಥಿಯೆಂಬ ವಿಚಾರ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್,  ಸಿ. ಪಿ ಯೋಗೇಶ್ವರ್ ನಮ್ಮ ಸ್ನೇಹಿತರು. ಅವರು ಯಾವತ್ತೂ ನಾನೇ ಅಭ್ಯರ್ಥಿ ಅಂತ ಹೇಳಿಲ್ಲ, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಇನ್ನು ಸಿ.ಎಚ್. ವಿಜಯಶಂಕರ್ ಬಿಜೆಪಿಗೆ ಬಂದಿರೋದು ಹುಣಸೂರು ಚುನಾವಣೆಯಲ್ಲಿ ತುಂಬಾ ಲಾಭದಾಯಕ ವಾಗಲಿದೆ ಎಂದು ನುಡಿದರು.

ಒಂದು ವೇಳೆ ವಿಶ್ವನಾಥ್ ಅಭ್ಯರ್ಥಿ ಆಗಲಿಲ್ಲ ಅಂದರೆ ನಾನು ಸಹ ಪ್ರಬಲ ಆಕಾಂಕ್ಷಿ…

ಹುಣಸೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಯೋಗಾನಂದ್  ಮಾತನಾಡಿ, ಉಪಚುನಾವಣೆಗೆ ಬೂತ್ ಮಟ್ಟದಲ್ಲಿ ಎಲ್ಲಾ ಸಿದ್ಧತೆ ಆಗಿದೆ. ಇಂದು ಚುನಾವಣೆಯ ರೂಪುರೇಷುಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಒಂದು ವೇಳೆ ವಿಶ್ವನಾಥ್ ಅಭ್ಯರ್ಥಿ ಆಗಲಿಲ್ಲ ಅಂದರೆ ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.

Key words: judgment-Supreme Court – disqualified MLA -H.Vishwanath- meeting- bjp Leader