ಸಿಎಂ ಗ್ರಾಮವಾಸ್ತವ್ಯಕ್ಕೆ  ಬಿಜೆಪಿಯವರ ಸರ್ಟಿಫಿಕೇಟ್ ಅಗತ್ಯವಿಲ್ಲ- ಸಚಿವ ಸಾ.ರಾ ಮಹೇಶ್ ಟಾಂಗ್ ….

ಮೈಸೂರು,ಜೂ,21,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಇಂದಿನಿಂದ ಪ್ರಾರಂಭವಾಗಿದ್ದು, ಗ್ರಾಮವಾಸ್ತವ್ಯದ ಬಗ್ಗೆ ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.

ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿಗರ ಸರ್ಟಿಫಿಕೇಟ್ ಅಗತ್ಯ ಇಲ್ಲ. ವಾಮಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿಯಲು  ಬಿಜೆಪಿ ಯತ್ನಿಸುತ್ತಿದ್ದಾರೆ. ಅಂತವರಿಂದ ಗ್ರಾಮವಾಸ್ತವ್ಯದ ಬಗ್ಗೆ ಒಳ್ಳೆಯ ಮಾತುಗಳನ್ನ ನೀರಿಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸಾ.ರಾ ಮಹೇಶ್ ಟಾಂಗ್ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಸಾ.ರಾ ಮಹೇಶ್, ಕಳೆದ  ಒಂದು ವರ್ಷದಿಂದ ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಇದನ್ನ ಬಿಟ್ಟರೇ ಅವರು ಯಾವ ಉತ್ತಮ ಸಲಹೆಗಳನ್ನ ಹೇಳುತ್ತಿಲ್ಲ. ಗ್ರಾಮ ವಾಸ್ತವ್ಯದಿಂದ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುವುದಿಲ್ಲ. ಆದ್ರೆ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ, ಅಧಿಕಾರಿಗಳ ಸ್ಪಂದನೆ ಸಿಗಲಿದೆ ಅನ್ನೋ ವಿಶ್ವಾಸ ಇದೆ. ಕೊಡಗಿನಲ್ಲಿ ಗ್ರಾಮವಾಸ್ತವ್ಯ ಮಾಡಬೇಕೆಂಬುದು ನಮ್ಮ ಮನವಿ ಇದೆ. ಉತ್ತರ ಕರ್ನಾಟಕ ಗ್ರಾಮವಾಸ್ತವ್ಯ ಮುಗಿದ ನಂತರ ಈ ಕಡೆ ಬರುವ ಚಿಂತನೆ ಇದೆ ಎಮದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸಾ.ರಾ ಮಹೇಶ್, ರಾಷ್ಟ್ರೀಯ ನಾಯಕರು ಹೇಳಿದ ಮೇಲೆ ಅವರ ತೀರ್ಮಾನದಂತೆ ನಡೆದುಕೊಳ್ಳಬೇಕು. ದೇವೇಗೌಡರು ತಮ್ಮ ಅನುಭವದ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ‌. ಸರ್ಕಾರದಲ್ಲಿ ಸಮಸ್ಯೆ ಇದೆಯಾ ಅಂತಾ ಸಮನ್ವಯ ಸಮಿತಿಯಲ್ಲಿ ಇರುವವವರನ್ನ ಕೇಳಿ ಎಂದು ಪ್ರತಿಕ್ರಿಯಿಸಿದರು.

ಹಾಗೆಯೇ ಅಂದು ಸರ್ಕಾರ ರಚಿಸುವ ವೇಳೆ  ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರದ ಬಗ್ಗೆ ನಮಗೆ ಗೊತ್ತಿಲ್ಲ. ಅಂದು ಚುನಾವಣಾ ಫಲಿತಾಂಶದ ನೋಡಿಕೊಂಡು ಮೈಸೂರಿನಲ್ಲೇ ಇದ್ದವು. ಮಧ್ಯಂತರ ಚುನಾವಣೆ ಬಗ್ಗೆ ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಜೊತೆ ಚರ್ಚೆ ನಡೆಸುತ್ತೇವೆ. ವರಿಷ್ಠರ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ತಿಳಿಸಿದರು.

Key words: CM –Gramvastavya- does not- need – BJP –Certificate-Sa.Ra Mahesh