ಸಿಟಿ ಮಾರುಕಟ್ಟೆ: ಬೆಂಗಳೂರು ನಗರದ ಅಂದಕ್ಕೆ ಒಂದು ಮುಕುಟ…!

ಬೆಂಗಳೂರು, ಆಗಸ್ಟ್ 8, 2021 (www.justkannada.in): ಕೋವಿಡ್ ಮಹಾಮಾರಿಯಿಂದಾಗಿ ದೀರ್ಘ ಅವಧಿಯವರೆಗೆ ಮುಚ್ಚಲಾಗಿದ್ದಂತಹ ಬೆಂಗಳೂರಿನ ಸಿಟಿ ಮಾರುಕಟ್ಟೆಯನ್ನು ಕಳೆದ ಕೆಲವು ವಾರಗಳಿಂದ ಪುನರಾರಂಭಿಸಲು ಸರ್ಕಾರ ಅನುಮತಿಸಿತು. ಬೆಂಗಳೂರಿನ ಸಿಟಿ ಮಾರುಕಟ್ಟೆ ರಾಜ್ಯ ರಾಜಧಾನಿಯ ಅತೀ ದೊಡ್ಡ ಹಾಗೂ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಮೊದಲು ಈಗಿರುವ ಸಿಟಿ ಮಾರುಕಟ್ಟೆಯ ಬಳಿಯೇ ಕಲ್ಲಿನ ಕೋಟೆ ಹಾಗೂ ಪೇಟೆಯ ಮಧ್ಯದಲ್ಲಿ ‘ಸಿದ್ದಿಕಟ್ಟೆ’ ಎಂದು ಕರೆಯಲ್ಪಡುತ್ತಿದ್ದಂತಹ ಒಂದು ದೊಡ್ಡ ಕೆರೆಯಿತ್ತಂತೆ! ೧೮೪೦ರ ದಶಕದಲ್ಲಿ ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯಾಗಿದ್ದಂತಹ ಗುಂಡೋಪಂತ್ ಎಂಬುವವರು ಸಿದ್ದಿಕಟ್ಟೆ ಕೆರೆಯ ದಂಡೆಯ ಮೇಲೆ ಒಂದು ಚಿಕ್ಕ ಅಗ್ರಹಾರವನ್ನು ನಿರ್ಮಿಸಿದರು. ಬ್ರಾಹ್ಮಣರಿಗಾಗಿಯೇ ನಿರ್ಮಿಸಿದ್ದಂತಹ ಆ ಅಗ್ರಹಾರದಲ್ಲಿ ವಾಸಿಸುತ್ತಿದ್ದಂತಹ ಬ್ರಾಹ್ಮಣರು ಗುಂಡೋಪಂತ್ ಅವರ ಖಾಸಗಿ ದೇವಾಲಯವೂ ಸೇರಿದಂತೆ ಸುತ್ತಮುತ್ತಲೂ ಇದ್ದಂತಹ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಿಕೊಂಡು ಜೀವನ ಸಾಗಿಸುತ್ತಿದ್ದರಂತೆ.

ಲಭ್ಯವಿರುವ ೧೮೦೦ರ ದಶಕದ ನಕ್ಷೆಗಳಲ್ಲಿರುವಂತೆ ನಗರ ತರಕಾರಿ ಮಾರುಕಟ್ಟೆ, ಅಥವಾ ಸಿಟಿ ಮಾರುಕಟ್ಟೆ ಎಂದು ಕರೆಯಲ್ಪಡುತ್ತಿದ್ದಂತಹ ಒಂದು ಮಾರುಕಟ್ಟೆಯೂ ಒಳಗೊಂಡಂತೆ ಈ ಸುತ್ತಲಿನ ಪ್ರದೇಶದಲ್ಲಿ ಹಲವು ಅನೌಪಚಾರಿಕ ಮಾರುಕಟ್ಟೆಗಳು ಆಗಲೇ ತಲೆ ಎತ್ತಿದ್ದವು.

ಸುಮಾರು ಆ ಕಾಲದಲ್ಲೇ ಭಾರತದಾದ್ಯಂತ ಹಲವು ಪ್ರದೇಶಗಳಲ್ಲಿ ಇಂತಹ ಮಾರುಕಟ್ಟೆಗಳು ನಗರ ಸಾರ್ವಜನಿಕ ಮೂಲಭೂತಸೌಕರ್ಯದ ಒಂದು ಅಗತ್ಯ ಎಂಬ ಅಂಶ ಗೋಚರಿಸಿತು. ಆ ಪ್ರಕಾರವಾಗಿ ದೇಶದ ಹಲವು ನಗರಗಳಲ್ಲಿ ಹೊಸ ಮಾರುಕಟ್ಟೆ ಕಟ್ಟಡಗಳನ್ನು ನಿರ್ಮಿಸಲಾಯಿತು. ಬ್ರಿಟಿಷ್ ಆಳ್ವಿಕೆ ಇದ್ದಾಗ ಭಾರತದಲ್ಲಿ ಆಕರ್ಷಕ ಪ್ರವೇಶದ್ವಾರಗಳಿರುವಂತಹ ಇಂತಹ ಮಾರುಕಟ್ಟೆಗಳನ್ನು ನಿರ್ಮಿಸಲಾದವು. ಒಳಾಂಗಣದಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಯಿತು. ಇಂತಹ ಎಲ್ಲಾ ಮಾರುಕಟ್ಟೆಗಳಲ್ಲಿಯೂ ‘ಕ್ಲಾಕ್ ಟವರ್’ಗಳು ಮುಖ್ಯ ರಚನೆಗಳಾಗಿದ್ದವು. ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆ, ಕೋಲ್ಕತ್ತಾದ ಸ್ಟೂವರ್ಟ್ ಹಾಗ್ಗ್ ಮಾರುಕಟ್ಟೆ ಹಾಗೂ ಚೆನ್ನೈನ ಮೂರ್ ಮಾರುಕಟ್ಟೆ ಕಟ್ಟಡಗಳು ಇದಕ್ಕೆ ಉದಾಹರಣೆಯಾಗಿವೆ.

ಉತ್ತಮ ನೈರ್ಮಲ್ಯಕ್ಕಾಗಿ

ಬೆಂಗಳೂರಿನಲ್ಲಿ, ೧೯೦೦ನೇ ಶತಮಾನದ ಆರಂಭದಲ್ಲಿ ಮೈಸೂರು ಮಹಾರಾಜರ ಸರ್ಕಾರವು ಉತ್ತಮ ನೈರ್ಮಲ್ಯ ಹಾಗೂ ಆರೋಗ್ಯವನ್ನು ಕಾಪಾಡುವ ಹಿನ್ನೆಲೆಯಲ್ಲಿ ಹೊಸ ಮಾರುಕಟ್ಟೆಯನ್ನು ನಿರ್ಮಿಸಲು ನಿರ್ಧರಿಸಿತು. ಏಕೆಂದರೆ, ಹಳೆಯ ಮಾರುಕಟ್ಟೆಗಳಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುತಿತ್ತು ಮತ್ತು ಈ ಸ್ಥಳಗಳಲ್ಲಿ ಚರಂಡಿ ಹಾಗೂ ನೈರ್ಮಲ್ಯ ನಿರ್ವಹಣೆ ಬಹಳ ಕಷ್ಟಕರವಾಗಿತ್ತು.

೧೯೦೭ರಲ್ಲಿಯೇ ನೂತನ ಮಾರುಕಟ್ಟೆ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಆದರೆ ಅಗತ್ಯ ಹಣಕಾಸು ಹಾಗೂ ಇನ್ನಿತರೆ ಅಡೆತಡೆಗಳಿಂದಾಗಿ ನಿರ್ಮಾಣ ಕೆಲಸಗಳು ವಿಳಂಬವಾದವು. ಈ ಕಾರಣದಿಂದಾಗಿ ಸಿದ್ದಿಕಟ್ಟೆ ಪ್ರದೇಶದ ಸುತ್ತಮುತ್ತಲಿನ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ೧೯೧೩ರಲ್ಲಿ ಆರಂಭವಾಯಿತು. ಆದರೆ ಅದಕ್ಕೂ ಹಲವು ವರ್ಷಗಳ ಹಿಂದೆಯೇ ಆಗಿನ ನಗರ ಸುಧಾರಣಾ ಸಮಿತಿಗೆ ಈ ಹೊಸ ಮಾರುಕಟ್ಟೆಯ ಪರಿಕಲ್ಪನೆ ಇತ್ತಂತೆ.

ನಂತರದಲ್ಲಿ ಆಗಿನ ಸರ್ಕಾರ ಸಿಟಿ ಮಾರುಕಟ್ಟೆ ಕಟ್ಟಡ ವಿನ್ಯಾಸ ಸಿದ್ಧಪಡಿಸಲು ಮುಂಬೈ ಮೂಲದ ವಾಸ್ತುಶಿಲ್ಪಿ ಇ.ಡಬ್ಲ್ಯು. ಫ್ರಿಚ್ಲೆ ಅವರನ್ನು ನೇಮಿಸಿತಂತೆ. ಫ್ರಿಚ್ಲೆ ಅವರು ಮೈಸೂರು ಅರಮನೆ ಕಟ್ಟಡದ ರೂವಾರಿಯಾಗಿದ್ದಂತಹ ಹೆನ್ರಿ ಇರ್ವಿನ್ ಅವರ ಜೊತೆಗೆ ಜ್ಯೂನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಫ್ರಿಚ್ಲೆ ಮೈಸೂರಿನಲ್ಲಿ ಲಲಿತ್ ಮಹಲ್ ಅರಮನೆಯ ವಿನ್ಯಾಸವನ್ನೂ ಸಿದ್ಧಪಡಿಸಿದ್ದರು.

ಫ್ರಿಚ್ಲೆ ಅವರು ಸಿದ್ಧಪಡಿಸಿದ ಸಿಟಿ ಮಾರುಕಟ್ಟೆ ಕಟ್ಟಡದ ವಿನ್ಯಾಸ ಹತ್ತಿರದಲ್ಲಿದ್ದಂತಹ ಕೆಲವು ಇತರೆ ಕಟ್ಟಡಗಳಿಂದ ಪ್ರೇರಣೆ ಪಡೆದಿತ್ತಂತೆ. ಉದಾಹರಣೆಗೆ ಸಿಟಿ ಮಾರುಕಟ್ಟೆ ಕಟ್ಟಡದ ಎರಡು ಗೋಪುರಗಳನ್ನು ಹೋಲುವ ರಚನೆ, ಅಲಂಕಾರಿಕ ರಚನೆಗಳು ವಿಕ್ಟೋರಿಯಾ ಆಸ್ಪತ್ರೆಯ ಟವರ್  ಗಳಿಂದ ಪ್ರೇರಣೆ ಪಡೆದಿದೆಯಂತೆ. ಆದರೆ, ಮಾರುಕಟ್ಟೆಯ ಅಂತಿಮ ರೂಪ, ಕಾರ್ಯನಿರ್ವಾಹಕ ಇಂಜಿನಿಯರ್ ಜಿಯಾ ಡಿ’ ಕ್ರೂಝ್ ಅವರ ಸಲಹೆಯ ಪ್ರಕಾರ ಹಲವಾರು ತಿದ್ದುಪಡಿಗಳೊಂದಿಗೆ ಸಿದ್ಧವಾಯಿತು.

ಆಗಿನ ನಗರ ಸುಧಾರಣಾ ಸಮಿತಿಯು ಹೊಸ ಮಾರುಕಟ್ಟೆಯ ವಿನ್ಯಾಸದ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಕೂಲಂಕುಷವಾಗಿ ಪರಿಶೀಲಿಸಿತಂತೆ. ಮಾರುಕಟ್ಟೆಯ ಒಳಗೆ ನಿರ್ಮಾಣವಾಗುವ ಮಳಿಗೆಗಳಿಗೆ ಹೆಚ್ಚು ನೈಸರ್ಗಿಕ ಗಾಳಿ ಬೆಳಕು ಬರುವಂತೆ, ಕಟ್ಟಡದ ಮುಂಭಾಗದಲ್ಲಿ ಅರ್ಧಚಂದ್ರಾಕೃತಿಯ ಆರ್ಚ್ ಗಳು ಅಥವಾ ಸೆಗ್ಮೆಂಟಲ್ ಆರ್ಚ್ ಗಳು, ಸ್ತಂಬಗಳು, ಫ್ರಿಚ್ಲೆ ಅವರ ಮೂಲ ವಿನ್ಯಾಸದ ಪ್ರಕಾರ ಇರಬೇಕೋ ಅಥವಾ ಡಿ’ಕ್ರೂಝ್ ಅವರ ಸಲಹೆಯಂತೆ ಇರಬೇಕೋ ಎನ್ನುವ ಕುರಿತು ಸುದೀರ್ಘವಾಗಿ ಆಲೋಚಿಸಿ, ಚರ್ಚಿಸಿಲಾಯಿತಂತೆ.

ಆಗ ಗಡಿಯಾರ ಗೋಪುರದ ವಿಷಯವೂ ಚರ್ಚೆಯಾಯಿತಂತೆ. ಹಣಕಾಸಿನ ಕೊರತೆ ಇರುವ ಸಂದರ್ಭದಲ್ಲಿ, ಅದು ನಿಜವಾಗಿಯೂ ಅಗತ್ಯವಿದೆಯೇ ಎನ್ನುವ ಕುರಿತು ಸುದೀರ್ಘ ಚರ್ಚೆಗಳು ನಡೆದವಂತೆ. ಆದರೆ ಗಡಿಯಾರ ಗೋಪುರ ಕೇವಲ ಅಲಂಕಾರಿಕ ರಚನೆಯಲ್ಲದೆ, ಮಾರುಕಟ್ಟೆಗೆ ಬಂದು ಹೋಗುವ ನೂರಾರು ಜನರಿಗೆ ಸಮಯ ಬಹಳ ಅಮೂಲ್ಯ ಎನ್ನುವ ಕಾರಣಕ್ಕಾಗಿ ಅದು ಅತ್ಯವಶ್ಯಕ ಎನ್ನುವುದು ಸಮಿತಿಯ ವಾದವಾಗಿತ್ತು. ಅಂತಿಮವಾಗಿ ಮಾರುಕಟ್ಟೆ ಕಟ್ಟಡದ ಪ್ರವೇಶದ್ವಾರದ ಎರಡು ಗೋಪುರಗಳ ನಡುವೆ ಗಡಿಯಾರವನ್ನು ಅಳವಡಿಸಲು ನಿರ್ಧರಿಸಲಾಯಿತಂತೆ.

ಹೊಸ ಮಾರುಕಟ್ಟೆ

ಈ ಹೊಸ ಮಾರುಕಟ್ಟೆ, ಅಥವಾ ನೂತನ ಜನರಲ್ ಮಾರುಕಟ್ಟೆ ೧೯೨೧ರಲ್ಲಿ ಉದ್ಘಾಟನೆಯಾಯಿತು. ಆದರೆ ಒಳಾಂಗಣದಲ್ಲಿರುವ ಮಳಿಗೆಗಳನ್ನು ಒಂದು ವರ್ಷದ ನಂತರ ಆರಂಭಿಸಲಾಯಿತು. ಮಾರುಕಟ್ಟೆಯ ಮುಂಭಾಗದ ದೊಡ್ಡ ತೆರೆದ ಸ್ಥಳದಲ್ಲಿ ಆಗಿನ ಮುನಿಸಿಪಾಲಿಟಿ ವತಿಯಿಂದ ಸಂಜೆ ವೇಳೆ ಸಂಗೀತ ಮೇಳಗಳು ನಡೆಯುತ್ತಿತ್ತು! ೧೯೨೦ರ ದಶಕದ ಕೊನೆಯ ವರ್ಷಗಳು ಹಾಗೂ ೧೯೩೦ನೇ ದಶಕದ ಆರಂಭದಲ್ಲಿ, ವಾಸ್ತವದಲ್ಲಿ ಈ ಹಿಂದೆ ಮಾರುಕಟ್ಟೆಯ ಒಳಾಂಗಣದಲ್ಲಿ ಮಟನ್ ಮಾರುಕಟ್ಟೆ ಆರಂಭಿಸಲು ಯೋಜಿಸಲಾಗಿತ್ತು. ಆದರೆ ನಂತರದಲ್ಲಿ ಮುಖ್ಯ ಮಾರುಕಟ್ಟೆಯ ಪಕ್ಕದಲ್ಲಿ ಆರಂಭಿಸಲಾಯಿತAತೆ. ೧೯೪೬ರಲ್ಲಿ ಈ ವಿಶೇಷ ಹಾಗೂ ಆಕರ್ಷಕ ಕಟ್ಟಡವನ್ನು ‘ಕೃಷ್ಣರಾಜೇಂದ್ರ ಮಾರುಕಟ್ಟೆ’ ಎಂದು ಮರುನಾಮಕರಣ ಮಾಡಲಾಯಿತು.

ಅಷ್ಟು ಆಲೋಚನಾಪೂರ್ವಕವಾಗಿ, ಅತ್ಯಂತ ಎಚ್ಚರಿಕೆಯಿಂದ ನಿರ್ಮಿಸಲಾದಂತಹ ಈ ಮಾರುಕಟ್ಟೆ ಕಟ್ಟಡವನ್ನು ಇತ್ತೀಚಿನ ವರ್ಷಗಳಲ್ಲಿ ಹಾಳುಗೆಡುವಲಾಗಿರುವುದು ದುರಂತ! ೧೯೯೭ರಲ್ಲಿ ಬಿಬಿಎಂಪಿ, ಮಾರುಕಟ್ಟೆಯ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಬಹಳ ಕಳಪೆ ವಿನ್ಯಾಸವಿರುವ ಕಟ್ಟಡವನ್ನು ನಿರ್ಮಿಸಿತು. ಕನಿಷ್ಠ ಮೂಲಭೂತ ಸೌಕರ್ಯಗಳ ಕಡೆಗೂ ಗಮನ ನೀಡದಂತೆ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಾರಣದಿಂದಾಗಿಯೇ ಇಂದು ಅಲ್ಲಿ ಅಷ್ಟು ಬೃಹತ್ ಪ್ರಮಾಣದಲ್ಲಿ ಕಸ ತುಂಬಿಕೊಳ್ಳುತ್ತಿದೆ. ವಾಸ್ತವದಲ್ಲಿ ಅತ್ಯಂತ ಗಲೀಜಿನ ಸ್ಥಳವಾಗಿ ರೂಪುಗೊಂಡಿದೆ.

೧೯೯೯ಲ್ಲಿ ಆರಂಭವಾದ ಮೈಸೂರು ರಸ್ತೆ ಫ್ಲೈಓವರ್ ನಿಂದಾಗಿ ಹಿಂದೊಮ್ಮೆ ದೊಡ್ಡ ತೆರೆದ ಸ್ಥಳವನ್ನು ಹೊಂದಿರುವ ಸಿಟಿ ಮಾರುಕಟ್ಟೆಯ ಮುಂಭಾಗದ ಜಾಗ ಕಣ್ಮರೆಯಾಯಿತು. ಅದರಿಂದ ಮಟನ್ ಮಾರುಕಟ್ಟೆ ಪಕ್ಕದಲ್ಲಿದ್ದಂತಹ ಅನೇಕ ಅಂಗಡಿಗಳೂ ವಿಭಜಿಸಿದಂತಾಯಿತು. ಇಂದು ಆ ಮಳಿಗೆಗಳ ಮಾಲೀಕರು ಹಿಂದಿನ ವೈಭೋಗವನ್ನು ಸ್ಮರಿಸುತ್ತಾ ಬಹುಶಃ ಆ ಸೊಬಗು ಪುನಃ ಬರುತ್ತದೆಯೇ ಎಂದು ಕನಸು ಕಾಣುತ್ತಾರೆ. ಅವರ ಕನಸಿನ ಪ್ರಕಾರ, ಸರ್ಕಾರ ಕೆ.ಆರ್. ಮಾರುಕಟ್ಟೆಯ ಹಿಂದಿನ ಸೊಬಗು, ವೈಭೋಗ ಮರುಕಳಿಸುವಂತಹ ಪ್ರಯತ್ನಗಳನ್ನು ಮಾಡುತ್ತದೆಯೇ ಎಂದು ಕಾದು ನೋಡಬೇಕು.

(ಈ ಲೇಖನದ ಬರಹಗಾರರು ‘ಡಿಸ್ಕವರಿಂಗ್ ಬೆಂಗಳೂರಿನ ಲೇಖಕರು ಹಾಗೂ ಇನ್ಟಾö್ಯಕ್ ಬೆಂಗಳೂರು ಆವೃತ್ತಿಯ ಸಂಚಾಲಕರು)

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: City Market-siddikatte- Bangalore