ಆರೋಗ್ಯ ವ್ಯವಸ್ಥೆ ಸುಧಾರಣೆ ಸಲುವಾಗಿ ಸದ್ಯದಲ್ಲೇ ಬೆಂಗಳೂರಲ್ಲಿ ‘ ಬಿಬಿಎಂಪಿ ಹೆಲ್ತ್‌ ಕೇರ್‌ ‘ ಜಾರಿ: ಡಾ. ಅಶ್ವತ್ಥನಾರಾಯಣ

ಬೆಂಗಳೂರು, ಮೇ 13, 2020 : (www.justkannada.in news ) ಆರೋಗ್ಯ ಕೇಂದ್ರಗಳನ್ನು ಸದೃಢಗೊಳಿಸುವ ‘ಬಿಬಿಎಂಪಿ ಹೆಲ್ತ್‌ ಕೇರ್‌’ ಅಡಿಯಲ್ಲಿ ನಗರದ ಆರೋಗ್ಯ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಈ ಹಿಂದೆ ಮಾಡಿದ್ದ ಪ್ರಸ್ತಾವನೆಗಳ ಪರಿಶೀಲನೆಗೆ ಇಂದು ಸಭೆ ನಡೆಸಲಾಯಿತು,”ಎಂದರು.

“ಬಿಬಿಎಂಪಿ ಆರೋಗ್ಯ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಸದೃಢಗೊಳಿಸುವ ಯೋಜನೆಯೇ ‘ಬಿಬಿಎಂಪಿ ಹೆಲ್ತ್‌ ಕೇರ್‌’. ಆ ಮೂಲಕ ಆರೋಗ್ಯ ಕೇಂದ್ರಗಳಲ್ಲಿ ರೋಗ ತಡೆಗೆ ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಹಾಗೂ ಪ್ರಾಥಮಿಕ ಮಟ್ಟದ ಚಿಕಿತ್ಸೆ, ಎಲ್ಲ ಕಾಯಿಲೆಗಳಿಗೂ ಔಷಧ ಹಾಗೂ ರೋಗ ಪತ್ತೆ, ತಪಾಸಣೆಗೆ ಲ್ಯಾಬ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲಾಗುವುದು,”ಎಂದು ತಿಳಿಸಿದರು.

bangalore-BBMP-health.care-DCM-Dr.ashwath.narayana-corporation

‘ಬಿಬಿಎಂಪಿ ಹೆಲ್ತ್‌ ಕೇರ್‌’

“ಬಿಬಿಎಂಪಿ ಹೆಲ್ತ್‌ ಕೇರ್‌’ ಪರಿಪೂರ್ಣ ಆರೋಗ್ಯ ವ್ಯವಸ್ಥೆಯಾಗಿದ್ದು, ನಗರದಲ್ಲಿ ಅಗತ್ಯ ಇರುವ ಎಲ್ಲರಿಗೂ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24/7 ತೆರದಿರಬೇಕು. ಎಲ್ಲ ವೇಳೆಯಲ್ಲೂ ಜನರಿಗೆ ಅಗತ್ಯ ಚಿಕಿತ್ಸೆ ದೊರೆಯಬೇಕು. ಇದಕ್ಕಾಗಿ ಟೆಲಿ ಮೆಡಿಸನ್‌, ಟೆಲಿ ಕನ್ಸಲ್ಟೇಷನ್‌ ಸೌಲಭ್ಯದೊಂದಿಗೆ ದಾದಿಯರು ಎಲ್ಲ ಸಮಯದಲ್ಲೂ ಕೆಲಸ ನಿರ್ವಹಿಸುವಂತಿರಬೇಕು. ಎಲ್ಲ ರೀತಿಯ ಪರೀಕ್ಷೆ ನಡೆಸಲು ಪ್ರಯೋಗಾಲಯಗಳು ಸಜ್ಜಾಗಿರಬೇಕು. ಯಾವುದೇ ಸಬೂಬು ಹೇಳದೇ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ಔಷಧ ಒದಗಿಸಬೇಕು. ಜತಗೆ, ಎಲ್ಲ ಕೇಂದ್ರಗಳಲ್ಲಿ ತಜ್ಞ ವೈದ್ಯರು ಲಭ್ಯ ಇರಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಲಾಗಿದೆ,”ಎಂದು ವಿವರಿಸಿದರು.

198 ವಾರ್ಡ್‌, 133 ಆರೋಗ್ಯ ಕೇಂದ್ರಗಳಲ್ಲಿ ಜನೌಷಧ ಕೇಂದ್ರ

“ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನಿಲ್ಲ ಎಂದು ರೋಗಿಗಳನ್ನು ವಾಪಸ್‌ ಕಳುಹಿಸುವಂತಿಲ್ಲ, ಅಗತ್ಯ ಇರುವಂಥ ಎಲ್ಲ ರೀತಿಯ ಔಷಧಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲ 198 ವಾರ್ಡ್‌ಗಳಲ್ಲಿ ಹಾಗೂ ಎಲ್ಲ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನ ಔಷಧ ಕೇಂದ್ರಗಳನ್ನು ತೆರೆಯಬೇಕು. ಹಿರಿಯ ನಾಗರಿಕರು ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಔಷಧದ ಜತೆಗೆ ಟೆಸ್ಟ್‌ ಸೌಲಭ್ಯ ಒದಗಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ,”ಎಂದು ಮಾಹಿತಿ ನೀಡಿದರು.

ಮಾಹಿತಿ ದಾಖಲೆ ವ್ಯವಸ್ಥೆ

“ಎಲ್ಲ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ವರದಿ ದಾಖಲೆಯ ವ್ಯವಸ್ಥೆ ಆಗಲಿದೆ. ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಂಗ್ರಹಿಸುವ ಪ್ರತಿ ವ್ಯಕ್ತಿಯ ಆರೋಗ್ಯ ವಿವರಗಳ ದಾಖಲೆ ಸಮರ್ಪಕವಾಗಿ ಆಗಬೇಕು. ಅಲ್ಲದೇ, ಆರೋಗ್ಯ ಕೇಂದ್ರಕ್ಕೆ ಬರುವವರ ವಿವರ, ಕಾಯಿಲೆ ಲಕ್ಷಣ, ಯಾವ ಚಿಕಿತ್ಸೆ, ಔಷಧ ನೀಡಲಾಗಿದೆ ಎಂಬ ಎಲ್ಲ ವಿವರಗಳನ್ನು ದಾಖಲಿಸಬೇಕು. ಇದಲ್ಲದೇ, ನಗರದ ಎಲ್ಲ ಡಯಾಗ್ನಾಸ್ಟಿಕ್‌ ಮತ್ತು ಲ್ಯಾಬ್‌ಗಳಲ್ಲಿ ನಡೆಯುವ ಎಲ್ಲ ರೀತಿಯ ಪರೀಕ್ಷೆಗಳು, ಆರೋಗ್ಯ ತಪಾಸಣೆಯ ವಿವರ ಬಿಬಿಎಂಪಿಗೆ ಸಿಗಬೇಕು. ಆರೋಗ್ಯ ವಿಚಾರದಲ್ಲಿ ಆಗುವಂಥ ಯಾವುದೇ ಬೆಳವಣಿಗೆ ಬಗ್ಗೆ ಬಿಬಿಎಂಪಿಗೆ ಸಂಪೂರ್ಣ ಮಾಹಿತಿ ಇರಬೇಕು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ,”ಎಂದು ಸಚಿವರು ವಿವರಿಸಿದರು.

bangalore-BBMP-health.care-DCM-Dr.ashwath.narayana-corporation

ಗ್ಯಾಪ್‌ ಅನಾಲಿಸಿಸ್‌ ಪರಿಶೀಲನೆ

ಕೊವಿಡ್‌ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೊರತೆಗಳನ್ನು ಪಟ್ಟಿ ಮಾಡಿ ಅದನ್ನು ಸೂಕ್ತವಾಗಿ ನಿಭಾಯಿಸಲು ಸೂಚಿಸಲಾಗಿತ್ತು. ಅದರಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಡಾ.ಅಶ್ವತ್ಥನಾರಾಯಣ ಅಧಿಕಾರಿಗಳಿಂದ ಮಾಹಿತಿ ಪಡೆದರು. ಖರೀದಿ ಮಾಡಿರುವ ಸುರಕ್ಷತಾ ಉಪಕರಣಗಳಾದ ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ಥರ್ಮಲ್‌ ಸ್ಕ್ಯಾನರ್‌ಗಳನ್ನು ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿರುವ ಬಗ್ಗೆ ವಿವರ ಪಡೆದು, ಸಿಬ್ಬಂದಿ ಹೆಚ್ಚಳದ ವಿಷಯವಾಗಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನೆಬ್ಯುಲೈಸರ್‌ಗಳ ಜತೆಯಲ್ಲೇ ಆಮ್ಲಜನಕ ಸಿಲಿಂಡರ್‌ಗಳು ಲಭ್ಯವಿರುವ ಜತೆಗೆ ಉಸಿರಾಟದ ತೊಂದರೆ ಪ್ರಕರಣಗಳಿಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ನಗರ ಪ್ರಾಥಮಿಕ ಹೆರಿಗೆ ಆಸ್ಪತ್ರೆ ಹಾಗೂ ರೆಫರಲ್‌ ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ಮುಂದಿನ ದಿನಗಳಲ್ಲಿ ಸ್ಯಾನಿಟೈಸೇಷನ್‌ ಚಟುವಟಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಹಾಜರಿದ್ದರು.

key words : bangalore-BBMP-health.care-DCM-Dr.ashwath.narayana-corporation