ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಕೂಲಂಕುಶವಾಗಿ ತಿಳಿದು ಸ್ವಾಗತಿಸಿ- ವಿಪಕ್ಷ ಹಾಗೂ ಸಂಘಟನೆಗಳಿಗೆ ಜೆ  ಎಸ್ ಜಗದೀಶ್ ಆಗ್ರಹ..

ಮೈಸೂರು,ಡಿಸೆಂಬರ್,11,2020(www.justkannada.in):  ರೈತರಿಗೆ ಮುಕ್ತ ಮಾರುಕಟ್ಟೆಯನ್ನು, ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷೆ ಎಪಿಎಂಸಿ ತಿದ್ದುಪಡಿ ಕಾಯ್ದೆಯ ಉದ್ದೇಶವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧಪಕ್ಷದವರು ಹಾಗೂ ಹಲವು ಸಂಘಟನೆಗಳು ಇದರ ಬಗ್ಗೆ ಕೂಲಂಕುಶವಾಗಿ ತಿಳಿದು  ಇದನ್ನು ಸ್ವಾಗತ ಮಾಡಬೇಕೆಂದು ಮೈಸೂರಿನ ಎಪಿಎಂಸಿ ನಿರ್ದೇಶಕರಾದ ಜೆ  ಎಸ್ ಜಗದೀಶ್ ರವರು ಆಗ್ರಹಿಸಿದ್ದಾರೆ.

ಜನಪ್ರಿಯಸರ್ಕಾರ ಯಾವುದೇ ಸಾರ್ವತ್ರಿಕ ನಿರ್ಧಾರ ತೆಗೆದುಕೊಳ್ಳುವಾಗ ಹಿಂದೆ ಇದ್ದ ಕಾಯ್ದೆಗಿಂತ ಅತ್ಯುತ್ತಮ ರೀತಿಯಲ್ಲಿ ಬದಲಾಯಿಸಿ ಜನಪ್ರಿಯಗೊಳಿಸಿಕೊಳ್ಳಬೇಕೆಂಬುದೇ ಪ್ರಮುಖ ಉದ್ದೇಶವಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಚಾಲನೆಯಲ್ಲಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು  ಮಾಡುತ್ತಿದೆ. ಈ ವಿಷಯವಾಗಿ ಮೈಸೂರಿನ ಎಪಿಎಂಸಿ ನಿರ್ದೇಶಕ ಜೆ ಎಸ್ ಜಗದೀಶ್ ರವರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.logo-justkannada-mysore

ಮೊದಲನೆಯದಾಗಿ, ಈ ತಿದ್ದುಪಡಿಯು ರೈತರಿಗೆ ಮುಕ್ತಮಾರುಕಟ್ಟೆಯ ಅವಕಾಶ ಕಲ್ಪಿಸಿಕೊಡುತ್ತದೆ. ಅಂದರೆ ರೈತರು ಎಪಿಎಂಸಿ ಮೂಲಕವೇ ತನ್ನ ಬೆಳೆಗಳನ್ನು  ಮಾರಬೇಕೆಂದಿಲ್ಲ. ತಮ್ಮ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡುವ ಸ್ವಾತಂತ್ರ ಹೊಂದಿರುತ್ತಾರೆ. ಕೊಂಡುಕೊಳ್ಳುವವರು ಯಾವುದೇ ರೀತಿಯ ನಿರ್ಬಂಧಗಳನ್ನು ಹೇರುವಂತಿಲ್ಲ. ಹಾಗಾದಲ್ಲಿ ಈ ಬಗ್ಗೆ ಕೋರ್ಟಿನಲ್ಲಿ ಪ್ರಶ್ನಿಸುವ ಅಧಿಕಾರವನ್ನು ರೈತರು ಹೊಂದಿರುತ್ತಾರೆ. ಅಲ್ಲದೆ ಈ ಕಾಯ್ದೆಯು ಕೃಷಿ ಸೇವೆಗೂ ಅನ್ವಯವಾಗುತ್ತದೆ. ಇದರಡಿಯಲ್ಲಿ ರೈತರು ತಮ್ಮ ಇಚ್ಛೆಯ ಕಂಪನಿಯೊಂದಿಗೆ ದೀರ್ಘಕಾಲದ ಒಪ್ಪಂದ ಮಾಡಿಕೊಳ್ಳಬಹುದು. ಆ ಕಂಪನಿಯಿಂದ ತಮಗೆ ಬೇಕಾದ ಸೌಕರ್ಯ ಸವಲತ್ತುಗಳನ್ನು ಪಡೆಯುವ ಅವಕಾಶವಿರುತ್ತದೆ. ಕೊಳ್ಳುವವರು ಸಣ್ಣಪುಟ್ಟ ಸಬೂಬುಗಳೊಂದಿಗೆ ಬೆಳೆಗಳನ್ನು ಕಡಿಮೆ ದರದಲ್ಲಿ ಕೊಳ್ಳುವುದರಿಂದ ರೈತರಿಗೆ ಈ ರೀತಿಯ ಅನ್ಯಾಯವಾಗುವುದನ್ನು ತಪ್ಪಿಸಬಹುದಾಗಿದೆ. ಅವರ ಬೆಳೆಗೆ ಉತ್ತಮ ಬೆಲೆಯನ್ನು ನೀಡುವ ಉದ್ದೇಶವಾಗಿದೆ.

ಎರಡನೆಯದಾಗಿ ಈ ಮೊದಲಿಗೆ ಕೃಷಿ ಉತ್ಪನ್ನಗಳನ್ನು ಮಾರಲು ಅಗತ್ಯವಾಗಿದ್ದ ಮಂಡಿ ಅಥವಾ ಎಪಿಎಂಸಿಗೇ ಹೋಗುವ ಅವಶ್ಯಕತೆ ಇರುವುದಿಲ್ಲ . ರಾಜ್ಯದ ಒಳಗೂ-ಹೊರಗೂ ಎಲ್ಲಿ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವುದೊ ಅಲ್ಲಿಯೇ ಅವುಗಳನ್ನು ಮಾರಬಹುದು. ಇನ್ನು “ಬೆಂಬಲ ಬೆಲೆಯ” ವಿಷಯ ಬಂದರೆ ರಾಜ್ಯದ ಹೊರಗೆ ಮಾರುವ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರೆಯುವುದಿಲ್ಲವಾದರೂ ಉಳಿದಂತೆ ಯಾವ ನಿಯಮಗಳಲ್ಲೂ ಬದಲಾವಣೆಗಳು ಇರುವುದಿಲ್ಲ ಹಾಗೂ ರೈತರೇ ನಿಗದಿಪಡಿಸಿ ಕೊಳ್ಳುವ ಮೊತ್ತಕ್ಕೆ ರಾಜ್ಯಸರ್ಕಾರ ತೆರಿಗೆಯನ್ನೂ ವಿಧಿಸುವುದಿಲ್ಲ. “ಬೆಂಬಲ ಬೆಲೆಯ ಹಿಂದೆ ಹೋಗುವ ರೈತರು ನೀವಾದರೆ ಮಂಡಿಗೆ ಬನ್ನಿ. ಅದಕ್ಕಿಂತಲೂ ಹೆಚ್ಚಿನ ಮಹತ್ವಾಕಾಂಕ್ಷಿಗಳು ನೀವಾದರೆ ನಿಮ್ಮ ದಾರಿಯನ್ನು ನೀವೇ ಕಂಡುಕೊಳ್ಳಿ” ಎನ್ನುತ್ತದೆ ಈ ಕಾಯ್ದೆ.

ಮೂರನೆಯದಾಗಿ ಬೆಲೆ ಏರಿಕೆ ಹಾಗೂ ಬೆಲೆ ಇಳಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು “ಅಗತ್ಯ ಸರಕು” ಎಂದು ಘೋಷಿಸುವ ಮೂಲಕ ಅಗತ್ಯವಿರುವ ಉತ್ಪನ್ನಗಳ ಬೆಲೆಯಲ್ಲಿ ಸಮತೋಲನ ಹೊಂದಿರುವಂತಾಗಿದೆ ಕಾಯ್ದೆ. ಈ ಕಾಯ್ದೆಯು ಬರಗಾಲ, ಪ್ರವಾಹ ಪರಿಸ್ಥಿತಿ ಹಾಗೂ ಇನ್ನಿತರೆ ತುರ್ತುಪರಿಸ್ಥಿತಿಗಳಲ್ಲಿ ಜನರಿಗೆ ಬೇಕಾಗುವ ಅಗತ್ಯ ಉತ್ಪನ್ನಗಳನ್ನು ರೈತರಿಗೂ ಹಾಗೂ ಸರಕಾರಕ್ಕೂ ಅವರವರ ಆದಾಯಕ್ಕೆ ಹಾನಿಯಾಗದಂತೆ ತಲುಪಿಸುವ ಉದ್ದೇಶದ್ದಾಗಿದೆ ಎಂದು ಜೆ  ಎಸ್ ಜಗದೀಶ್ ತಿಳಿಸಿದ್ದಾರೆ.

Key words: Welcome – about -APMC Amendment Act- Director of APMC –mysore-JS Jagadish