ರೈತ ಮುಖಂಡರ ಜೊತೆ ಕೇಂದ್ರ ಸಚಿವರ ಸಭೆ ವಿಫಲ: ಸ್ಪಷ್ಟ ನಿರ್ಧಾರ ತಿಳಿಸದ ಕೇಂದ್ರದ ವಿರುದ್ದ ಆಕ್ರೋಶ.

ನವದೆಹಲಿ,ಫೆಬ್ರವರಿ,13,2024(www.justkannada.in): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ದ ದೆಹಲಿ ಚಲೋ ನಡೆಸುತ್ತಿರುವ ರೈತ ಮುಖಂಡರ ಜೊತೆ ಕೇಂದ್ರ ಸಚಿವರಾದ ಪಿಯುಷ್ ಗೋಯಲ್, ಕೃಷಿ ಸಚಿವ ಅರ್ಜುನ್ ಮುಂಡ ನಡೆಸಿದ ಸಭೆ ವಿಫಲವಾಗಿದ್ದು ರೈತ ಮುಖಂಡರು ಪ್ರತಿಭಟನೆ ಮುಂದುವರೆಸಿದ್ದಾರೆ.  ಸ್ಪಷ್ಟ ನಿರ್ಧಾರ ತಿಳಿಸದ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆ ಹುಸಿಗೊಳಿಸಿದ ವಿರುದ್ಧ ರೈತರ ದೆಹಲಿ ಚಲೋ ಟ್ಯಾಕ್ಟರ್ ರ್ಯಾಲಿ, ನಡೆಸಲಾಗುತ್ತಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪಿಯುಷ್ ಗೋಯಲ್, ಕೃಷಿ ಸಚಿವ ಅರ್ಜುನ್ ಮುಂಡ ಅವರು  ರೈತಮುಖಂಡರ ಜೊತೆ ಪಂಜಾಬ್ ನ ಚಂಡಿಗಢದಲ್ಲಿ ನಿನ್ನೆ ಸಂಜೆ 6 ಗಂಟೆಯಿಂದ 11:00 ತನಕ ಸಭೆ ನಡೆಸಿದರು.  ಆದರೆ ಸಭೆ ಯಾವುದೇ ಸಫಲತೆ ಕಾಣಲಿಲ್ಲ.  ಹಿಂದಿನ ವರ್ಷ ದೆಹಲಿ ಹೋರಾಟದಲ್ಲಿ ಮಡಿದ ರೈತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ನೀಡಿದ್ದೇವೆ.  ಈ ಹೋರಾಟದಲ್ಲಿ ದಾಖಲಾಗಿದ್ದ 3365 ಪೊಲೀಸ್ ಮೊಕದ್ದಮೆ ವಾಪಸ್ ಪಡೆದಿದ್ದೇವೆ ಎಂದು ಸಚಿವ ಪಿಯೂಷ್ ಗೂಯಲ್ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆ ಆರಂಭದಲ್ಲಿಯೇ ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲಾ, ಕರ್ನಾಟಕದಿಂದ ಬರುತ್ತಿರುವ ರೈತರನ್ನ ಅಮಾನುಷವಾಗಿ ರೌಡಿಗಳ ರೀತಿಯಲ್ಲಿ ಬಂಧಿಸಿರುವ ಪೊಲೀಸರ ಕ್ರಮ ಹಾಗೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಪತ್ನಿಗೆ ತಲೆಗೆ ಪೆಟ್ಟು ಬೀಳಲು ಪೊಲೀಸರಿಗೆ ಕಾರಣರಾಗಿದ್ದಾರೆ.  ಈ ಬಗ್ಗೆ ನಿಮ್ಮ ಸರ್ಕಾರದ ನಡವಳಿಕೆ ಸರಿಯಲ್ಲ.  ತಾವು ಉತ್ತರಿಸಬೇಕು ಎಂದರು.  ಆ ವೇಳೆ ಸಚಿವ ಪಿಯೂಷ್ ಗೋಯಲ್ ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಕ್ಕೆ ಪಡೆದಿದ್ದೇವೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.

ಸುದೀರ್ಘ 5 ಗಂಟೆಗಳ ಚರ್ಚೆ ನಡೆದರೂ ಸರ್ಕಾರ ಸ್ಪಷ್ಟವಾದ ನಿರ್ಧಾರವನ್ನು ತಿಳಿಸಲಿಲ್ಲ.  ನಾವು ಮೂರು ತಿಂಗಳಿಂದಲೇ ಚಳುವಳಿ ಬಗ್ಗೆ ಘೋಷಣೆ ಮಾಡಿದ್ದೇವೆ.  ಸರ್ಕಾರ ಅಂತಿಮ ಕ್ಷಣದಲ್ಲಿ ಸಭೆ ಕರೆದಿದ್ದೀರಿ ಆದರೆ ಯಾವುದೇ ನಿರ್ಧಾರ ಹೇಳುತ್ತಿಲ್ಲ.  ಆದ್ದರಿಂದ ನಾವು ಚಳುವಳಿಯನ್ನು ನಿಲ್ಲಿಸುವುದಿಲ್ಲ. ಫೆ. 13 ರಿಂದ ಡೆಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡುತ್ತೇವೆ. ಶಾಂತಿಯುತವಾಗಿ ರ್ಯಾಲಿ ಮಾಡುತ್ತೇವೆ.  ನೀವು ನಮ್ಮನ್ನು ಬಂಧಿಸುವುದಾದರೆ ನಾವು ಹೆದರುವುದಿಲ್ಲ ಎಂದು ಘೋಷಣೆ ಮಾಡಿ ಸಭೆಯಿಂದ ಹೊರಗೆ ಬರಲಾಯಿತು.

ದೇಶದ ಎಲ್ಲ ರಾಜ್ಯಗಳ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ದೆಹಲಿಯಲ್ಲಿ ಚಳುವಳಿ ನಡೆಸಲಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಕಬ್ಬು ಬೆಳೆಗೆ ಎಫ್ ಆರ್ ಪಿ ದರ,  ಡಾ.  ಸ್ವಾಮಿನಾಥನ್ ವರದಿಯಂತೆ ಉತ್ಪಾದನಾ ವೆಚ್ಚದ ಅರ್ಧದಷ್ಟು ಹೆಚ್ಚುವರಿ ಸೇರಿಸಿ ಬೆಲೆ ನಿಗದಿ ಆಗಬೇಕು.

ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು . ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರಬರಬೇಕು. ದೇಶಾದ್ಯಂತ 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10 ಸಾವಿರ ಪಿಂಚಣಿ ಯೋಜನೆ ಜಾರಿಗೆ ತರಬೇಕು . ಪ್ರಧಾನಿ ಫಸಲ್ ಭೀಮಾ ಯೋಜನೆ ಎಲ್ಲಾ ಬೆಳೆಗಳಿಗೂ ಅನ್ವಯಾಗಬೇಕು. ಪ್ರತಿ ರೈತರ ಹೊಲದ ಬೆಳೆ ನಷ್ಟ ಪರಿಹಾರ ನೀಡುವಂತಾಗಬೇಕು. ಕೃಷಿ ಕಾರ್ಮಿಕರಿಗೆ ಎನ್ ಆರ್ ಇಜಿ ದಿನ ಭತ್ಯೆ ಕನಿಷ್ಠ 700 ರೂ.  ನಿಗದಿ ಆಗಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ವಿದ್ಯುತ್  ಖಾಸಗಿಕರಣ ನೀತಿ ಕೈ ಬಿಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ  ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಲ್ಲ ರಾಜ್ಯಗಳಿಂದ ಲಕ್ಷಾಂತರ ರೈತರು  ರ್ಯಾಲಿ ಮೂಲಕ ದೆಹಲಿ ಚಲೋ ಆಂದೋಲನ ನಡೆಸುತ್ತಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ರೈತ ಮುಖಂಡರುಗಳಾದ ಜಗಜಿತ್ ಸಿಂಗ್ ದಲೆವಾಲ, ಶಿವಕುಮಾರ್ ಕಕ್ಕ, ಅಭಿವಮನ್ನು ಕೂಹರ, ಕುರುಬೂರು ಶಾಂತಕುಮಾರ್, ಹರಪಾಲ ಬಿಲಾರಿ, ಕೆ. ವಿ ಬಿಜು, ಪಾಂಡ್ಯ, , ಸುಖಂದರ್ ಕೌರ, ಜರ್ನಲ್ ಸಿಂಗ್, ಕೇಂದ್ರ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Key words: Union Minister- meeting – farmer- leaders -Center – clear decision.