ಮಂಡ್ಯ,ಸೆಪ್ಟಂಬರ್,23,2026 (www.̤justkannada.in): ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಿವೃತ್ತ ಹಾಸ್ಟೆಲ್ ಅಧೀಕ್ಷಕ ಎಂ. ಶಿವರಾಜು ಅವರ ಮನೆ ಹಾಗೂ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ತಿಂಗಳಷ್ಟೇ ನಿವೃತ್ತರಾಗಿದ್ದ ಶಿವರಾಜು ಅವರಿಗೆ ಸೇರಿದ ಆಸ್ತಿಗಳ ಪರಿಶೀಲನೆ ವೇಳೆ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಹಾಗೂ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.
ದಾಳಿ ವೇಳೆ 2.50 ಲಕ್ಷ ರೂ. ನಗದು, ಸುಮಾರು 600 ಗ್ರಾಂ ಚಿನ್ನ, 15 ಲಕ್ಷ ರೂ. ಮೌಲ್ಯದ ಎರಡು ಕಾರುಗಳು ಪತ್ತೆಯಾಗಿವೆ. ಜೊತೆಗೆ 5 ನಿವೇಶನ, 2 ಮನೆ, 2 ವಾಣಿಜ್ಯ ಕಟ್ಟಡಗಳು, ಒಂದು ಫಾರ್ಮ್‌ಹೌಸ್ ಹಾಗೂ 6 ಎಕರೆ ಕೃಷಿ ಭೂಮಿ ಸೇರಿದಂತೆ ಒಟ್ಟು ಸುಮಾರು 2.71 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಗಮನಾರ್ಹವಾಗಿ, ಹಾಸ್ಟೆಲ್ ಮಕ್ಕಳಿಗೆ ವಿತರಿಸಬೇಕಿದ್ದ ಪುಸ್ತಕಗಳು ಹಾಗೂ ಬೆಡ್ ಶೀಟ್ ಗಳು ಶಿವರಾಜು ಅವರ ಮನೆಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ದಾಳಿ ವೇಳೆ ದುಬಾರಿ ಮದ್ಯದ ಬಾಟಲಿಗಳೂ ಪತ್ತೆಯಾಗಿವೆ.
ಆದಾಯದ ಮೂಲಕ್ಕೆ ಹೋಲಿಸಿದರೆ ಇಷ್ಟೊಂದು ಪ್ರಮಾಣದ ಆಸ್ತಿ ಹೇಗೆ ಬಂದಿದೆ ಎಂಬುದರ ಕುರಿತು ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ಈ ದಾಳಿ ಮದ್ದೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.






