ಬೆಂಗಳೂರು,ಸೆಪ್ಟಂಬರ್,21,2026 (www.justkannada.in): ರಾಜ್ಯದ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪೌರಕಾರ್ಮಿಕರಿಗಾಗಿ ಪತ್ರಕರ್ತರು ಬಳಗ ಒತ್ತಾಯಿಸಿದೆ.
ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್ ಬೂಕನಕೆರೆ, ಎನ್. ರವಿಕುಮಾರ್ ಟೆಲೆಕ್ಸ್, ಮಾರುತಿ ಪಾವಗಡ, ಟಿ. ಗುರುರಾಜ್, ಮಹಾಂತೇಶ ಹಿರೇಮಠ ಹಾಗೂ ಸೋಮಶೇಖರ್ ಕವಚೂರು ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಬೇಕು, ಸರ್ಕಾರಿ ನೌಕರರ ಸಮಾನ ಸ್ಥಾನಮಾನ ನೀಡಬೇಕು ಹಾಗೂ ಪ್ರತ್ಯೇಕ ವೇತನ ಮಂಡಳಿ ರಚಿಸಿ ವೇತನ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.
ಪೌರಕಾರ್ಮಿಕರಿಗೆ ನಿಯಮಿತ ಆರೋಗ್ಯ ತಪಾಸಣೆ, ನಗದುರಹಿತ ಆರೋಗ್ಯ ಚಿಕಿತ್ಸಾ ಯೋಜನೆ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕು. ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರು, ಸಹಾಯಕರು ಹಾಗೂ ಆಪರೇಟರ್ ಗಳನ್ನೂ ಪೌರಕಾರ್ಮಿಕರೆಂದು ಪರಿಗಣಿಸಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಸೇವೆಯಲ್ಲಿರುವಾಗ ಮೃತಪಟ್ಟ ಪೌರಕಾರ್ಮಿಕರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಬೇಕು ಹಾಗೂ ಪೌರಕಾರ್ಮಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ಸಮಿತಿ ರಚಿಸಿ ಮೂರು ತಿಂಗಳೊಳಗೆ ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿದೆ.
Key words: Journalists, urge, fulfillment, civic workers, demands






