ನ.5ರಿಂದ ಭಾರತದ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನ: ದೇಶ ವಿದೇಶಗಳ 12 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ- ಕೇಂದ್ರ ಸಚಿವ ಹರ್ಷವರ್ಧನ್

ಮೈಸೂರು,ಅ,12,10,2019(www.justkannada.in): ನವೆಂಬರ್ 5 ರಿಂದ ಭಾರತದ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನ-2019 ನಡೆಯಲಿದ್ದು, ದೇಶ ವಿದೇಶಗಳ 12 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಮಂತ್ರಾಲಯ ಸಚಿವ ಹರ್ಷವರ್ಧನ್ ತಿಳಿಸಿದರು.

ಮೈಸೂರಿನ‌ ಸಿಎಫ್‌ಟಿಆರ್‌ಐನ ಚಲುವಾಂಬ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹರ್ಷವರ್ಧನ್, ನವೆಂಬರ್ 5 ರಿಂದ 8 ರವರೆಗೆ ಕೊಲ್ಕತಾದಲ್ಲಿ  ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನ ನಡೆಯಲಿದೆ. ವಿದ್ಯಾರ್ಥಿಗಳ ಸಂಶೋಧನೆ, ಆವಿಷ್ಕಾರ, ರೈತರ ತಾಂತ್ರಿಕ ಸಾಧನೆಗಳು ಸೇರಿದಂತೆ ತಂತ್ರಾಂಶ ಸಂಶೋಧನೆಯ ವಸ್ತುಪ್ರದರ್ಶನ ಆಯೋಜಿಸಲಾಗುವುದು. ಮಕ್ಕಳಿಗಾಗಿ‌ ವಿದ್ಯಾರ್ಥಿಗಳ ವಿಜ್ಞಾನ ಗ್ರಾಮ‌ ನಿರ್ಮಾಣ ಮಾಡಲಾಗುವುದು. ವಿಜ್ಞಾನ ಗ್ರಾಮದಲ್ಲಿ ದೇಶದ ವಿವಿದ ರಾಜ್ಯಗಳ 2,500 ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಯುವ ವಿಜ್ಞಾನಿಗಳ ಮೇಳಕ್ಕಾಗಿ 1500 ವಿದ್ಯಾರ್ಥಿಗಳು ಆಯ್ಕೆ ಮಾಡಲಾಗಿದೆ. ಇನ್ನು ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ (ಐಐಎಸ್‌ಎಫ್)-2019 ಸಮ್ಮೇಳನದಲ್ಲಿ ವಿಭಿನ್ನ 28 ಕಾರ್ಯಕ್ರಮಗಳು  ನಡೆಯಲಿವೆ ಎಂದು ಮಾಹಿತಿ ನೀಡಿದರು.

ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಭಾರಿ ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆಯಡಿ ಪ್ರತಿಯೊಬ್ಬ ಸಂಸದ ತನ್ನ ಕ್ಷೇತ್ರದ 5 ವಿದ್ಯಾರ್ಥಿಗಳು ಹಾಗೂ 1 ಶಿಕ್ಷಕರನ್ನು ನಾಮನಿರ್ದೇಶಿಸಿದ್ದಾರೆ. ಇದು ಮೂಲ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಆಯೋಜನೆ ಮಾಡಲಾಗಿದೆ. ತಂತ್ರಜ್ಞಾನ ಸ್ಥಳೀಯವಾದರೂ ವಿಜ್ಞಾನ ವಿಶ್ವಮಟ್ಟದ್ದಾಗಬೇಕು. ಸಮ್ಮೇಳನದಲ್ಲಿ ಮಕ್ಕಳ ನೂತನ ಆವಿಷ್ಕಾರದ ಜೊತೆಗೆ ನುರಿತ ವಿಜ್ಞಾನಿಗಳ ಸಂವಾದ ಇರುತ್ತದೆ ಎಂದು ಹರ್ಷವರ್ಧನ್ ತಿಳಿಸಿದರು.

ರೈತರಿಗೆ ಅನುಕೂಲ ಆಗುವಂತಹ ಕೃಷಿ ವಿಜ್ಞಾನಿಗಳ ಸಮ್ಮೇಳನವನ್ನೂ ಆಯೋಜನೆ ಮಾಡಲಾಗಿದೆ. ಕೇಂದ್ರ ಸರ್ಕಾರ ವರ್ಷದಿಂದ ‌ವರ್ಷಕ್ಕೆ ತನ್ನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತನ್ನು ಹೆಚ್ಚು ಮಾಡಿದೆ. ಕಳೆದ 5 ವರ್ಷದಲ್ಲಿ ವಿಜ್ಞಾನ ಕ್ಷೇತ್ರಕ್ಕೂ ಶೇಕಡಾವಾರು ಗಣನೀಯ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ. ಪ್ರತಿವರ್ಷ ವಿಜ್ಞಾನ ಮೇಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಪ್ರತಿ ವರ್ಷವೂ ಅನೇಕ ಗಿನ್ನಿಸ್ ದಾಖಲೆಗಳನ್ನು ನಮ್ಮ ಯುವ ವಿಜ್ಞಾನಿಗಳು ನಿರ್ಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ವರ್ಷ 5ವಿದ್ಯಾರ್ಥಿಗಳು 5 ಗ್ರಾಮವನ್ನ ದತ್ತು ಪಡೆದಿದ್ದರು. ಅವರ ಪ್ರತಿಯೊಂದು ಖರ್ಚನ್ನು ಸರ್ಕಾರವರೆ ನೋಡಿಕೊಳ್ಳುತ್ತಿದೆ. ಈ ರೀತಿಯಾಗಿ ಯುವ ಸಮುದಾಯ ಮುಂದೆ ಬಂದರೇ ನಮ್ಮ ಸಹಕಾರ ಇರುತ್ತೆ. ಈಗ ನಮ್ಮ ತಂತ್ರಜ್ಞಾನ ವಿಶ್ವ ಮಟ್ಟದಲ್ಲಿ ಸೇರ್ಪಡೆಗೊಳ್ಳುತ್ತಿದೆ. ಅದಕ್ಕೆ ನಮಗೆ ತೃಪ್ತಿಯೂ ಇದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದರು.

ರಾಜ್ಯಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಐಟಿ,ಇಡಿ ದಾಳಿ  ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಾ.ಹರ್ಷವರ್ಧನ್, ಇದೊಂದು ಬೇಸ್‌ಲೆಸ್ ಅಲಿಗೇಷನ್. ಸ್ಥಾಪಿತ ಸಂಸ್ಥೆಗಳು ಅವುಗಳ ಕೆಲಸ ಮಾಡುತ್ತಿವೆ. ಸರ್ಕಾರ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದೇ ವ್ಯರ್ಥ ಎಂದರು.

Key words: International -Science Conference – India- Kolkata-mysore-  Union Minister -Harshavardhan