2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್’ನಿಂದ ಪ್ರಧಾನಿ ಅಭ್ಯರ್ಥಿ

ಬೆಂಗಳೂರು, ಆಗಸ್ಟ್ 27, 08,2023 (www.justkannada.in): 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

26 ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿ ಕುರಿತು ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಚರ್ಚೆ ಮತ್ತು ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು “ಅಹಂಕಾರಿ” ಸ್ವಭಾವವನ್ನು ತೋರಿಸಬಾರದು. 2014 ರಲ್ಲಿ ಬಿಜೆಪಿ ಕೇವಲ 31% ಮತಗಳಿಂದ ಅಧಿಕಾರಕ್ಕೆ ಬಂದಿರುವುದು, ಉಳಿದ 69% ಮತದಾರರು ಅವರ ವಿರುದ್ಧವಾಗಿಯೇ ಇದ್ದಾರೆ. ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಚುನಾವಣೆಯಲ್ಲಿ ಸ್ಥಳೀಯ ಅಂಶಗಳೇ ಮುಖ್ಯವಾಗಿರುತ್ತವೆ. ಆದರೆ ದೇಶದ ಪ್ರಸ್ತುತ ಪರಿಸ್ಥಿತಿಯು ಎಲ್ಲಾ ಪಕ್ಷಗಳ ಮೇಲೆ ಒತ್ತಡ ಸೃಷ್ಟಿಸಿದೆ. ಸಾರ್ವಜನಿಕರು ಇಂತಹ ಒತ್ತಡ ಸೃಷ್ಟಿಸಿದ್ದು, ಎಲ್ಲ ಪಕ್ಷಗಳ ಮೈತ್ರಿಗೆ ಕಾರಣವಾಗಿದೆ ಎಂದಿದ್ದಾರೆ.