ರಫ್ತಿಗೆ ಉತ್ತೇಜನ ನೀಡುವಂತಹ ಹೊಸ ಕೈಗಾರಿಕಾ ನೀತಿ ಜಾರಿ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,22,2023(www.justkannada.in):  ಉದ್ಯಮಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ರಫ್ತಿಗೆ ಉತ್ತೇಜನ ನೀಡುವಂತಹ ಹೊಸ ಕೈಗಾರಿಕಾ ನೀತಿಯನ್ನು ರಾಜ್ಯ ಸರಕಾರವು ತ್ವರಿತವಾಗಿ ಜಾರಿಗೆ ತರಲಿದೆ. ರಫ್ತು ಚಟುವಟಿಕೆಯಲ್ಲಿ ದೇಶದ ಮಟ್ಟದಲ್ಲಿ ಮೂರನೇ ಸ್ಥಾನದಲ್ಲೇ ಇರುವ ರಾಜ್ಯವು ಮೊದಲ ಸ್ಥಾನಕ್ಕೆ ಏರಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ 12 ವಿಭಾಗಗಳ ಅಡಿಯಲ್ಲಿ ಒಟ್ಟು 68 ಉದ್ಯಮಿಗಳಿಗೆ 2017-18, 2018-19 ಮತ್ತು 2019-20ನೇ ಸಾಲಿನ ಪ್ರಶಸ್ತಿ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಬಯೋಕಾನ್‌, ಟೊಯೋಟಾ ಕಿರ್ಲೋಸ್ಕರ್, ಎಚ್‌ಎಎಲ್‌, ಮೈಸೂರು ಪೇಂಟ್ಸ್ & ವಾರ್ನಿಶ್‌, ಜಿ.ಇ.ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಗೋಕಲ್‌ದಾಸ್‌ ಎಕ್ಸ್‌ಪೋರ್ಟ್ಸ್ ಮುಂತಾದ ಕಂಪನಿಗಳ ಪ್ರತಿನಿಧಿಗಳು ಪುರಸ್ಕಾರಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, “ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಮತ್ತೆ ಬಲ ತುಂಬಲು ನಿರ್ಧರಿಸಲಾಗಿದೆ. ಇದರ ಮೂಲಕ ಯುವಜನರಿಗೆ ಸಮರ್ಪಕ ತರಬೇತಿ ನೀಡಿ, ಉದ್ಯಮಗಳಿಗೆ ಬೇಕಾದಂತಹ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗುವುದು. ರಾಜ್ಯ ಸರಕಾರದ ಐದನೇ ಗ್ಯಾರಂಟಿಯಾದ ‘ಯುವನಿಧಿ’ಯಡಿಯಲ್ಲಿ ಅಂತಿಮವಾಗಿ ನಮ್ಮಲ್ಲಿನ ಉದ್ಯಮಗಳಿಗೆ ಬೇಕಾದಂತೆ ವಿದ್ಯಾವಂತರನ್ನು ಸಿದ್ಧಗೊಳಿಸಲಾಗುವುದು” ಎಂದು ತಿಳಿಸಿದರು.

ರಾಜ್ಯದಲ್ಲಿ 1980ರಿಂದಲೂ ಕೈಗಾರಿಕಾ ನೀತಿ ಇದ್ದು, ಅದು ಪುರೋಗಾಮಿಯಾಗಿದೆ. ಈಗ ಈ ಖಾತೆಯ ಹೊಣೆ ವಹಿಸಿಕೊಂಡಿರುವ ಎಂ.ಬಿ ಪಾಟೀಲರಿಗೂ ಕೈಗಾರಿಕೆಗಳನ್ನು ಬೆಳೆಸಬೇಕೆಂಬ ಉತ್ಸಾಹವಿದೆ. ಅವರಿಗೆ ಸರಕಾರವು ಎಲ್ಲ ಬೆಂಬಲ ಕೊಡಲಿದೆ. ನಮ್ಮಲ್ಲಿ ಉದ್ಯಮಗಳಿಗೆ ಉತ್ತೇಜನಕಾರಿ ವಾತಾವರಣವಿದೆ. ಇದಕ್ಕೆ ತಕ್ಕಂತೆ ಕಾನೂನು ಸುವ್ಯವಸ್ಥೆಯನ್ನೂ ನಿರ್ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕೈಗಾರಿಕೆಗಳ ಬೆಳವಣಿಗೆಯಿಂದ ನಿರುದ್ಯೋಗ ನಿವಾರಣೆ, ಜಿಡಿಪಿ ಬೆಳವಣಿಗೆ ಮತ್ತು ದೇಶದ ಆರ್ಥಿಕತೆಯ ಅಭಿವೃದ್ಧಿ ಸಾಧ್ಯವಾಗಲಿದೆ. ಹೂಡಿಕೆ, ಉದ್ಯಮ ಮತ್ತು ಉದ್ಯೋಗಸೃಷ್ಟಿ ಒಂದು ಸರಪಳಿಯಂತೆ ಇದೆ. ಇವೆಲ್ಲವನ್ನೂ ಸರಕಾರ ಅರಿತಿದ್ದು, ಉದ್ಯಮಿಗಳಿಗೆ ಎಲ್ಲ ಪ್ರೋತ್ಸಾಹವನ್ನೂ ಕೊಡಲಾಗುವುದು ಎಂದು ಅವರು ನುಡಿದರು.

ಸಿಎಂ ಜತೆ ಸದ್ಯವೇ ಚರ್ಚೆ: ಸಚಿವ ಎಂ.ಬಿ ಪಾಟೀಲ್

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, “ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಚುರುಕಾಗಿ ನಡೆಯಬೇಕಿದ್ದು, ನಾವು ದಾಪುಗಾಲಿಡಲು ನಿರ್ಧರಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ಉದ್ಯಮಿಗಳೊಂದಿಗೆ ಚರ್ಚಿಸಲು ಒಪ್ಪಿಕೊಂಡಿದ್ದಾರೆ” ಎಂದರು.

ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಬಲ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ‘ಕಾಮನ್‌ ಫೆಸಿಲಿಟೀಸ್‌ ಸೆಂಟರ್‍‌’ಗಳನ್ನು ಸ್ಥಾಪಿಸಿ, ಒದಗಿಸಲು ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಜತೆ ವಿಚಾರ ವಿನಿಮಯ ನಡೆಸಲಾಗಿದೆ. ಇದರಲ್ಲಿ ಆ ಸಂಸ್ಥೆ ಶೇಕಡ 70 ಮತ್ತು ರಾಜ್ಯ ಸರಕಾರ ಶೇಕಡ 30ರಷ್ಟು ಬಂಡವಾಳ ಹೂಡಲಿವೆ ಎಂದು ಅವರು ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕಾರ್ಯವಿಧಾನವನ್ನು ಸಂಪೂರ್ಣ ಪಾರದರ್ಶಕವನ್ನಾಗಿ ಮಾಡಿ, ಉದ್ಯಮಿಗಳು ಸುಗಮವಾಗಿ ತಮ್ಮ ಚಟುವಟಿಕೆ ನಡೆಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಈಗಾಗಲೇ ಭಾರೀ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಿ, ವಿಷನ್‌ ಗ್ರೂಪ್‌ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

2 & 3ನೇ ಹಂತದ ನಗರಗಳಿಗೆ ಹೋಗಿ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, “ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ದಾಟಿದ್ದು, ಒತ್ತಡ ಅನುಭವಿಸುತ್ತಿದೆ. ಜೊತೆಗೆ ಎಲ್ಲ ಉದ್ದಿಮೆಗಳೂ ರಾಜಧಾನಿಯಲ್ಲೇ ಕೇಂದ್ರೀಕೃತಗೊಂಡಿವೆ. ಆದ್ದರಿಂದ ಉದ್ಯಮಿಗಳು ಇನ್ನು ಮುಂದೆ 2 ಮತ್ತು 3ನೇ ಹಂತದ ನಗರಗಳತ್ತ ಗಮನ ಹರಿಸಬೇಕು. ಇಂಥವರಿಗೆ ಸರಕಾರವು ವಿಶೇಷ ಪ್ರೋತ್ಸಾಹ, ಸವಲತ್ತುಗಳನ್ನು ಕೊಡಲಿದೆ. ಈ ಮೂಲಕ ಗ್ರಾಮಾಂತರ ಪ್ರದೇಶದ ಯುವಜನರ ಪ್ರತಿಭೆಗೂ ಮನ್ನಣೆ ಕೊಡಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

Key words: Implementation – new -industrial- policy – promote- exports-CM Siddaramaiah