ಹೆಲ್ತ್ ರಿಜಿಸ್ಟರ್’ಗೆ ಮುನ್ನುಡಿ ಬರೆದ ಸರ್ಕಾರ: ಹೆಸರಾಂತ ತಜ್ಞರ ಜತೆ ಸಚಿವ ಸುಧಾಕರ್ ಸಮಾಲೋಚನೆ

ಬೆಂಗಳೂರು : “ಆರೋಗ್ಯ ಕರ್ನಾಟಕ’ಕ್ಕೆ ವೇದಿಕೆ ಕಲ್ಪಿಸಲಿರುವ “ಹೆಲ್ತ್ ರಿಜಿಸ್ಟರ್’ ಯೋಜನೆ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ಮುನ್ನಡಿ ಬರೆದರು.

ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹೆಲ್ತ್ ರಿಜಿಸ್ಟರ್ ಯೋಜನೆ ಸಂಬಂಧ ಆರೋಗ್ಯ ವಲಯದ ತಜ್ಞರ ಜತೆ ಸಚಿವ ಸುಧಾಕರ್ ಮೊದಲ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡರು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹದಿನೆಂಟು ಮಂದಿ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ಇಂಥ ಯೋಜನೆ ಜಾರಿಗೊಳಿಸಿರುವ ದೇಶಗಳಲ್ಲಿ ಅಳವಡಿಸಿಕೊಂಡಿರುವ ಪದ್ಧತಿ, ಯೋಜನೆ ಜಾರಿಗೆ ರಾಜ್ಯದಲ್ಲಿ ಎದುರಾಗುವ ಸವಾಲು, ಅಡ್ಡಿ- ಆತಂಕಗಳು, ಯೋಜನೆಯ ಸ್ವರೂಪ, ಮನೆ ಮನೆ ಸಮೀಕ್ಷೆಗೆ ಅಳವಡಿಸಿಕೊಳ್ಳಬೇಕಿರುವ ಅಂಶಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಆರೋಗ್ಯ ಇಲಾಖೆಯ ನಾನಾ ವಿಭಾಗಗಳು ಈಗಾಗಲೇ ಹೊಂದಿರುವ ಮಾಹಿತಿ, ಖಾಸಗಿ ವಲಯದ ನೆರವು ಪಡೆಯುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಜ್ಞರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು. ಆ ಮೂಲಕ ಸದೃಢ, ಆರೋಗ್ಯವಂತ ಕರ್ನಾಟಕ ರೂಪಿಸಬೇಕು ಎಂಬುದು ನಮ್ಮ ಕನಸು. ಅದಕ್ಕಾಗಿ ಹೆಲ್ತ್ ರಿಜಿಸ್ಟರ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಇದನ್ನು ಸಾಕಾರಗೊಳಿಸಲು ತಜ್ಞರು ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಮೊದಲ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಾಜ್ಯದ ಆರೋಗ್ಯಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಪರಿಣಿತರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಯೋಜನೆ ರೂಪುರೇಷೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವ ಸುಧಾಕರ್ ತಿಳಿಸಿದರು.

ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರಿಗೂ ಸರ್ಕಾರ ವೆಚ್ಚ ಮಾಡುವ ಪ್ರತಿ ಪೈಸೆಯ ಪ್ರಯೋಜನ ಸಿಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆ ವಿವರ ತಿಳಿದು ಮುಂದುವರಿಯಲು ಸೂಚನೆ ನೀಡಿದ್ದಾರೆ. ದೇಶದಲ್ಲೇ ಮೊದಲ ಸಲ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದೇವೆ. ನಮಗೆ ಇದೊಂದು ದೊಡ್ಡ ಸವಾಲು, ಅಸಾಧಾರಣ ಪ್ರಯತ್ನ ಎಂಬ ಅಂಶವೂ ಗಮನದಲ್ಲಿದೆ. ಇದು ಗಣತಿ ಮಾದರಿಯ ಮನೆ ಮನೆಗೂ ತೆರಳಿ ಮಾಹಿತಿ ಪಡೆಯಬೇಕಿರುವ ಕಾರ್ಯಕ್ರಮ. ಪ್ರಾಯೋಗಿಕವಾಗಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

ಹೆಲ್ತ್ ರಿಜಿಸ್ಟರ್ ಯೋಜನೆಗೆ ಮೊದಲ ಹಂತದಲ್ಲಿ ಸಾರ್ವಜನಿಕ ಮಾಹಿತಿ ಪಡೆಯುವುದು ದೊಡ್ಡ ಸವಾಲು. ಇದನ್ನು ನಿಭಾಯಿಸಲು ಖಾಸಗಿ ರಂಗದ ತಜ್ಞರು ಜತೆಗೆ ತಾಂತ್ರಿಕತೆಯ ನೆರವು ಅಗತ್ಯ. ಇವತ್ತಿನ ಸಂದರ್ಭದಲ್ಲಿ ಅನುದಾನ ಒದಗಿಸುವುದು ಕೂಡ ತ್ರಾಸದಾಯಕ ಸಂಗತಿ. ಅದಕ್ಕಾಗಿ ಕೈಗಾರಿಕೆಗಳವರ ನೆರವು ಪಡೆಯಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ರೂಪು ರೇಷೆ ಇತ್ಯರ್ಥಪಡಿಸಲಾಗುತ್ತದೆ. ಒಮ್ಮೆ ನಮಗೆ ರಾಜ್ಯದ ಆರೂವರೆ ಕೋಟಿ ಜನರ ಮಾಹಿತಿ ಸಿಕ್ಕರೆ ಲಿಂಗ, ಪ್ರದೇಶ, ವಯೋಮಾನ ಆದಿಯಾಗಿ ಅನೇಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ವಿನ್ಯಾಸಗೊಳಿಸಬಹುದು. ಕೊರೋನಾ ನಂತರದ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮುನ್ನೆಲೆಗೆ ಬರವುದು ಅನಿವಾರ್ಯ ಎಂದರು.

ಈಗಾಗಲೇ ಇಸ್ರೇಲ್‍ನಲ್ಲಿ ಜಾರಿಗೊಳಿಸಿರುವ ಇಂಥದ್ದೇ ಕಾರ್ಯಕ್ರಮ ಯಶಸ್ವಿಯಾಗಿದ್ದು ಪರಿಣಾಮಕಾರಿ ಆರೋಗ್ಯ ಸೇವೆ ನೀಡುತ್ತಿದೆ. ಅದನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿ ಈಗಾಗಲೇ ಲಭ್ಯವಿರುವ ದತ್ತಾಂಶವನ್ನು ಮೊದಲು ಬಳಕೆ ಮಾಡಿಕೊಳ್ಳಬಹುದು, ಅದರ ಜತೆಗೆ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಪಡೆಯಲು ಯಾವ ಕ್ರಮ ಅಳವಡಿಸಿಕೊಳ್ಳಬೇಕು ಎಂಬುದನ್ನು ತಜ್ಞರು ವಿವರಿಸಿದರು. ಸರ್ಕಾರ ಕೈಗೊಂಡಿರುವ ಈ ಯೋಜನೆಯನ್ನು ಎಲ್ಲ ತಜ್ಞರು ಮುಕ್ತಕಂಠದಿಂದ ಶ್ಲಾಘಿಸಿ, ಎಂದೊ ಆಗಬೇಕಿದ್ದ ಈ ಕೆಲಸ ಕೊರೋನಾ ವಿರುದ್ಧದ ಹೋರಾಟ ನಡೆಸಿರುವ ಈಗಲಾದರೂ ಕೈಗೊಳ್ಳಲು ನಿರ್ಧರಿಸಿ ಸಚಿವ ಸುಧಾಕರ್ ಚಾಲನೆ ನೀಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ. ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಗಿರೀಶ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಅವರಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಪ್ರಭುದೇವ್, ಸಾರ್ವಜನಿಕ ಆರೋಗ್ಯ ವಿಭಾಗದ ತಜ್ಞರಾದ ಡಾ. ಎಂ.ಕೆ. ಸುದರ್ಶನ್, ಹೆಸರಾಂತ ತಜ್ಞರುಗಳಾದ ಡಾ. ವಿವೇಕ್ ಜವಳಿ, ಡಾ. ಶರಣ್ ಪಾಟೀಲ್, ಡಾ. ರಾಮಚಂದ್ರ, ಡಾ. ಸತೀಶ್‍ಬಾಬು, ಡಾ. ಸವಿತಾ, ಡಾ. ಅರವಿಂದ ಶೆಣೈ, ಡಾ. ದಿವಾಕರ್, ಡಾ. ಆಂಜಿನಪ್ಪ, ಡಾ. ಗಂಗಾಧರ್, ಡಾ. ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.