ಪದವಿ ಪರೀಕ್ಷೆ ಅಕ್ರಮದಲ್ಲಿ ಮೈಸೂರು ವಿವಿ ಸಿಬ್ಬಂದಿ ಪಾತ್ರವಿಲ್ಲ: ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಸ್ಪಷ್ಟನೆ

ಮೈಸೂರು, ಜೂನ್ 13, 2021 (www.justkannada.in): ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಂಟಿ ಕಾರ್ಯದರ್ಶಿಯಾದ ಶ್ರೀ ಸೋಮಸುಂದರ್ ಕೆ.ಎಸ್. ದಿನಾಂಕ 9/6/2021 ರಂದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ದೂರನ್ನು ಸಹಿಸಿರುತ್ತಾರೆ.

ಇವರ ದೂರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 2021ನೇ ಸಾಲಿನ ಏಪ್ರಿಲ್ 10 ಮತ್ತು 17 ರಂದು ನಡೆಸಿರುವ ರಸಾಯನಶಾಸ್ತ್ರ ವಿಷಯದ ಪರೀಕ್ಷೆಯ ಸಂಬಂಧ ಕೆಲವು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ಉತ್ತರಪತ್ರಿಕೆಗಳನ್ನು ಬದಲ ಮಾಡುವ ಕೃತ್ಯದಲ್ಲಿ ಭಾಗಿಯಾಗಿರುವ ಮಹಾರಾಣಿ ಸರ್ಕಾರಿ ಮಹಿಳಾ ವಿಜ್ಞಾನ ಕಾಲೇಜಿನ ಎರಡನೇ ದರ್ಜೆ ಗುಮಾಸ್ತರಾದ ಮೊಹಮ್ಮದ್ ಮತ್ತು ಮೈಸೂರು ವಿಶ್ವವಿದ್ಯಾನಿಲಯವು ಪರೀಕ್ಷಾ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊರಗುತ್ತಿಗೆ ನೀಡಿರುವ ಮೆಟಾ-ಐ ಸಂಸ್ಥೆಯ ನೌಕರನಾದ ರಾಕೇಶ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪೇಟೆಯ ವಿದ್ಯಾರ್ಥಿಗಳಾದ ಚಂದನ್ ಮತ್ತು ಚೇತನ್ ಹಾಗೂ ಇತರೆ ವ್ಯಕ್ತಿಗಳ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಈ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಪರಿಶೀಲಸಿ ತನಿಖೆಯನ್ನು ನಡೆಸಲು ಒಂದು ವಿಚಾರಣಾ ಉಪಸಮಿತಿಯನ್ನು ದಿನಾಂಕ 9/6/2021 ರಂದು ರಚಿಸಲಾಯಿತು ಮತ್ತು ಅಂದೇ ಮಹಾರಾಣಿ ಸರ್ಕಾರಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಿಗೆ ಉತ್ತರಪತ್ರಿಕೆಗಳಿಗೆ ಸಂಬಂಧಿಸಿದಂತೆ ದಾಸ್ತಾನು ವಿವರಗಳನ್ನು ಸಲ್ಲಿಸುವಂತೆ ಪತ್ರ ಬರೆಯಲಾಯಿತು.

ಈ ಉಪಸಮಿತಿಯು ದಿನಾಂಕ 10/5-2021 ರಂದು ಸಭೆಯನ್ನು ನಡೆಸಿ ಶ್ರೀ ಸೋಮಸುಂದರ್‌, ಕೆ.ಎಸ್., ಜಂಟಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಮಿತಿ ನೀಡಿರುವ ದೂರು ಮತ್ತು ಲಗತ್ತಿಸಿರುವ ದಾಖಲೆಗಳು ಹಾಗೂ ಮೇಲ್ಕಂಡ ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ಸರ್ಕಾರಿ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು, ಮೊಹಮದ್ ನಿಸಾರ್‌, ಎರಡನೇ ದರ್ಜೆ ಗುಮಾಸ್ತ, ಮೆಟಾ-ವಿ ಕಂಪನಿಯ ಮುಖ್ಯಸ್ಥರು ಹಾಗೂ ರಾಕೇಶ್ ಮತ್ತು ವಿದ್ಯಾರ್ಥಿಗಳಾದ ಚಂದನ್, ಚೇತನ್ ಇವರುಗಳಿಗೆ ಕಾರಣ ಕೇಳುವ ನೋಟೀಸ್‌ನ್ನು ಮತ್ತು ದಿನಾಂಕ 22/06/2021 ರಂದು ವಿಚಾರಣಾ ಸಮಿತಿಯ ಮುಂದೆ ಹಾಜರಾಗುವಂತೆ ನೋಟೀಸ್‌ನ್ನು ನೀಡಲಾಗಿರುತ್ತದೆ.

ಸದರಿ ಪ್ರಕರಣವು ಮೇಲ್ನೋಟಕ್ಕೆ ಭಾರತದ ದಂಡ ಸಂಹಿತೆಯ ಉಲ್ಲಂಘನೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಡದ ವ್ಯಕ್ತಿಗಳು ವಿಶ್ವವಿದ್ಯಾನಿಲಯಕ್ಕೆ ಕಳಂಕ ತರುವ ಕೃತ್ಯ ಎಸಗಿರುವುದು ಕಂಡುಬಂದಿರುವುದರಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವಂತಹ ಲಕ್ಷ್ಮೀಮಂ ಪೋಲೀಸ್ ಠಾಣಿಗೆ ದಿನಾಂಕ 11/6/2021 ರಂದು ದೂರನ್ನು ದಾಖಲಸಲಾಗಿದೆ.

ಶ್ರೀ ಸೋಮಸುಂದರ್‌.ಕೆ.ಎಸ್. ಆರೋಪಿಸಿರುವಂತೆ ಮತ್ತು ನರಸಿಂಹರಾಜ ಉಪವಿಭಾಗದ, ಮಂಡಿ ಪೊಲೀಸ್ ಸ್ಟೇಷನ್ ರವರ ಪ್ರಥಮ ವರ್ತಮಾನ ವರದಿಯ ಪ್ರಕಾರ ಮಹಾರಾಣಿ ಸರ್ಕಾರಿ ಮಹಿಳಾ ವಿಜ್ಞಾನ ಕಾಲೇಜಿನ ದ್ವಿತೀಯ ದರ್ಜೆ ಗುಮಾಸ್ತರಾದ ಮೊಹಮ್ಮದ್ ನಿಸಾರ್‌ ಮತ್ತು ಮೈಸೂರು ವಿಶ್ವವಿದ್ಯಾನಿಲಯವು ಗುತ್ತಿಗೆ ನೀಡಿರುವ ಮೆಟಾ-ಐ ಸಂಸ್ಥೆಯ ನೌಕರನಾದ ರಾಕೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪೇಟೆ ವಿದ್ಯಾರ್ಥಿಗಳಾದ ಚಂದನ್ ಮತ್ತು ಚೇತನ್, ಮಂಡಿ ಮೊಹಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ ನಾರಾಯಣಸ್ವಾಮಿ ಎಂಬುವವರು ಮಾತ್ರ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ವಿಶ್ವವಿದ್ಯಾನಿಲಯದ ಯಾವುದೇ ಸಿಬ್ಬಂದಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ವಿ.ಜ್ಞಾನ ಪ್ರಕಾಶ್ ತಿಳಿಸಿದ್ದಾರೆ.