ಬಿಜೆಪಿ ಶಾಸಕ ಯತ್ನಾಳ್ ಗೆ ಪ್ರಧಾನಿ ಮೋದಿಯೇ ಪ್ರತಿಸ್ಪರ್ಧಿ-ಸಚಿವ ದಿನೇಶ್ ಗುಂಡೂರಾವ್ ಲೇವಡಿ.

ಬೆಂಗಳೂರು,ಏಪ್ರಿಲ್,25,2024 (www.justkannada.in):  ಕರ್ನಾಟಕದಲ್ಲಿ ಮುಸ್ಲೀಮರಿಗೆ ಒಬಿಸಿ ಸಮುದಾಯದ ಮೀಸಲಾತಿ ಹಂಚಿಕೆ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್,  ಸುಳ್ಳು ಹೇಳುವದರಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್  ಯತ್ನಾಳ್ ​ಗೆ ಪ್ರಧಾನಿ ಮೋದಿಯವರೇ ಕಾಂಪಿಟೇಷನ್ ಕೊಡುತ್ತಿದ್ದಾರೆ. ಯತ್ನಾಳ್ ಗೆ ಮೋದಿ ಅವರೇ ಪ್ರತಿಸ್ಪರ್ಧಿ. ಯತ್ನಾಳ್ ಅವರಿಗಿಂತ ಕೆಳಮಟ್ಟದ ಹೇಳಿಕೆ ಮತ್ತು ಸುಳ್ಳುಗಳನ್ನು ಮೋದಿ ಹೇಳುತ್ತಿದ್ದಾರೆ. ಮತ್ತೆ ಪ್ರಧಾನಿ ಆಗುವುದಿಲ್ಲ ಎಂಬ ಭಯದಿಂದ ಸುಳ್ಳು ಹೇಳಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಮೋದಿ ಹೇಳಿಕೆ ಸತ್ಯವಾಗಿದ್ದರೇ ದಾಖಲೆ ಸಮೇತ ತರಬೇಕಿತ್ತು ಯಾವ ರೀತಿ  ಮೀಸಲಾತಿ ಕಡಿತ ಆಗಿದೆ ಎಂದು ಆದೇಶ ಹೊರಡಿಸಲಿ. ಮೋದಿಗೆ ಯಾವ ಮಾಹಿತಿ ಕೂಡ ಇಲ್ಲದೆಯೇ ಸುಳ್ಳು ಹೇಳುತ್ತಾರೆ. ದಲಿತರ ಹಿಂದುಳಿದವರ ಮೀಸಲಾತಿ ಬದಲಾವಣೆ ಸಾಧ್ಯವೇ ಇಲ್ಲ. ಮೋದಿ ಕರ್ನಾಟಕ ಇತಿಹಾಸ ತಿಳಿದುಕೊಂಡು ಮಾತನಾಡಿಲಿ ಎಂದು ದಿನೇಶ್ ಗುಂಡುರಾವ್ ಟಾಂಗ್ ಕೊಟ್ಟರು.

ಚಿನ್ನಪ್ಪರೆಡ್ಡಿ ವರದಿ ಆಧರಿಸಿಯೇ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲಾತಿ ನೀಡಿಲ್ಲ. ಇದನ್ನು ಈಗ ಯಾಕೆ ಪ್ರಶ್ನೆ ಮಾಡ್ತಿದ್ದೀರಿ? ಹತ್ತು ವರ್ಷ ಯಾಕೆ ಇದರ ಬಗ್ಗೆ ಮಾತನಾಡಿಲ್ಲ ಮೋದಿ ಎಂದು ಪ್ರಶ್ನೆ ಮಾಡಿದರು.

ಮೀಸಲಾತಿ ಬದಲಾವಣೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇಲ್ಲ. ದಲಿತರ, ಹಿಂದುಳಿದ ವರ್ಗದ ಮೀಸಲಾತಿ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Key words: Minister, Dinesh Gundurao, PM Modi, Yatnal