ಟಿಪ್ಪು ಎಕ್ಸ್ ಪ್ರೆಸ್ ಗೆ ಒಡೆಯರ್ ಹೆಸರಿಡಲು ಮನವಿ: ಪ್ರತಾಪ್ ಸಿಂಹ ವಿರುದ್ಧ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿ

ಮೈಸೂರು,ಫೆಬ್ರವರಿ,12,2022(www.justkannada.in):   ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿರುವುದು ದುರಾದೃಷ್ಟಕರ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್  ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಅಬ್ದುಲ್  ಮಜೀದ್, ಒಬ್ಬ ಸಂಸದನಿಗೆ ಈ ರೀತಿಯ ಕೋಮುವಾದಿ ಚಿಂತನೆ ಇರುವುದು ಸರಿಯಲ್ಲ. ಇದು ಅವರ ಫ್ಯಾಸಿಸ್ಟ್ ಮನೋಭಾವವನ್ನು ತೋರಿಸುತ್ತಿದೆ. ಕೆಆರ್ ಎಸ್ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪುಸುಲ್ತಾನ್. ಟಿಪ್ಪು ದೂರದೃಷ್ಟಿಯ ರಾಜನಾಗಿದ್ದ. ಅವರ ಫಲವಾಗಿ ಅಂದಿನ ಕಾಲದಲ್ಲೇ 35 ಸಾವಿರ ಕೆರೆ ಕಟ್ಟೆ ಕಾಲುವೆಗಳು ನಿರ್ಮಾಣವಾಗಿವೆ. ಹೊಸದೊಂದು ರೈಲು ತಂದು ಅದಕ್ಕೆ ಒಡೆಯರ್ ಹೆಸರು ಇಡಿ. ಈಗ ಇರುವ ಟಿಪ್ಪು ಹೆಸರನ್ನು ಬದಲಿಸುವುದು ಸರಿಯಲ್ಲ. ಮೋದಿಯವರು ಮೈಸೂರಿಗೆ ಬಂದಿದ್ದಾಗ ಬುಲೆಟ್ ರೈಲು ತರುತ್ತೇನೆ ಎಂದಿದ್ದರು.ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಭರವಸೆ ನೀಡಿದ್ದರು‌. ಪ್ರತಾಪ್ ಸಿಂಹ ಇದನ್ನು ಮೋದಿಯವರ ಬಳಿ ಕೇಳಬೇಕು ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಈ ಬಾರಿ ಜನಪರ ಬಜೆಟ್ ಮಂಡಿಸಬೇಕು.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅಬ್ದುಲ್ ಮಜೀದ್,  ರಾಜ್ಯ ಸರ್ಕಾರ ಈ ಬಾರಿ ಜನಪರ ಬಜೆಟ್ ಮಂಡಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಮಂಡಿಸಲು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.ಈ ಬಾರಿಯ ಬಜೆಟ್ ಜನಪರವಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದವರಿಗೆ ಪೂರಕ ಬಜೆಟ್ ಮಂಡಿಸಬೇಕು. ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ 10 ಸಾವಿರ ಕೋಟಿ ಬಜೆಟ್ ನಲ್ಲಿ ಮೀಸಲಿಡಬೇಕು. ಉರ್ದು ಭಾಷೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಉರ್ದು ಯುನಿವರ್ಸಿಟಿ ಪ್ರಾರಂಭಿಸಬೇಕು ಎಂದು ಹೇಳಿದರು.

ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಹೋರಾಟ ರಾಜ್ಯ ಸರ್ಕಾರದಿಂದ ಪ್ರೇರಿತಗೊಂಡ ಹೋರಾಟವಾಗಿದೆ. ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಇದು ರಾಜ್ಯ ಸರ್ಕಾರದ ಪ್ರೇರಿತ ಹೋರಾಟವಾಗಿದೆ. ಕೆಂಪುಕೋಟೆ ಮೇಲೂ ಕೇಸರಿ ಧ್ವಜ ಹಾರಿಸುವುದಾಗಿ ಸಚಿವ ಈಶ್ವರಪ್ಪ ಹೇಳಿರುವುದು, ದೇಶದ್ರೋಹಿ ಹೇಳಿಕೆಯಾಗಿದೆ. ಸಚಿವ ಈಶ್ವರಪ್ಪರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು. ವಿಧ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುವಾದ ತುಂಬಬಾರದು. ದುಡ್ಡು, ಶಾಲುಗಳನ್ನು ಹಂಚುವುದು ಯಾವ ಸಂದೇಶ ನೀಡುತ್ತಿದೆ. ಹಿಜಾಬ್ ವಿವಾದದಿಂದ ರಾಜಕೀಯ ಲಾಭ ಪಡೆಯಬೇಕಾಗಿದೆ. ಇದಕ್ಕಾಗಿ ವಿವಾದಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣಗುರುರವರ ಸ್ತಬ್ದ ಚಿತ್ರಕ್ಕೆ ಕೇಂದ್ರ ಸರ್ಕಾರ ನಿರಾಕರಣೆ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯ ಸೇರಿದಂತೆ ಸಂಘಪರಿವಾರದ ನಾಯಕರೇ ಪ್ರತಿಭಟನೆಗೆ ಮುಂದಾಗಿದ್ದರು. ಹಾಗಾಗಿ ಆ ವಿಚಾರದ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿಯೇ ಹಿಜಾಬ್ ವಿವಾದವನ್ನು ಹುಟ್ಟುಹಾಕಲಾಗಿದೆ. ಸಮವಸ್ತ್ರ ಧರಿಸಲು ವಿರೋಧಿಸುತ್ತಿಲ್ಲ. ಸಮವಸ್ತ್ರ ಬಣ್ಣದ ವೇಲನ್ನೇ ತಲೆಗೆ ಧರಿಸಿಕೊಳ್ಳುವುದಾಗಿ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ವಿಷಯ ಮುಂದಿಟ್ಟುಕೊಂಡು ಮುಸ್ಲಿಂ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಕಲ್ಲು ಹಾಕಬಾರದು. ಸಂವಿಧಾನ ಅವರಿಗೂ ವೈಯುಕ್ತಿಕ ಹಕ್ಕುಗಳನ್ನು ಕಲ್ಪಿಸಿಕೊಟ್ಟಿದೆ. ಮರ್ಯಾದ ಪುರುಷೋತ್ತಮ ಶ್ರೀರಾಮನಿಗೆ ಅವಮಾನ ಮಾಡಲಾಗುತ್ತಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಹೆದರಿಸುವುದು, ಹಲ್ಲೆ ಮಾಡುವುದು ಶ್ರೀರಾಮನ ಆದರ್ಶವಲ್ಲ. ಶ್ರೀರಾಮ ಎಂದೂ ಕೂಡ ಮಹಿಳಾ ಪೀಡಕನಾಗಿರಲಿಲ್ಲ. ಜೈ ಶ್ರೀರಾಮ್ ‌ಘೋಷಣೆ ಕೂಗುತ್ತಾ ವಿದ್ಯಾರ್ಥಿನಿಯರನ್ನು ಪೀಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನ್ಯಾಯಾಲಯದ ತೀರ್ಪಿನ ನಂತರವೂ ನಾವು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ನಿಲುವಿನ ಪರವಾಗಿರುತ್ತೇವೆ. ನಾವು ಅವರಿಗೆ ನೈತಿಕ ಬೆಂಬಲ ನೀಡುತ್ತೇವೆ. ಮುಸ್ಲಿಂ ಮಹಿಳೆಯರು ಮಸೀದಿಗೆ ಹೋಗಲು ಮೊದಲಿನಿಂದಲೂ ಅವಕಾಶವಿದೆ. ಮಹಿಳೆಯರು ಮಸೀದಿಗೆ ಹೋದರೆ ನಮ್ಮ ಅಡ್ಡಿಯಿಲ್ಲ ಎಂದು  ಈ ಬಗ್ಗೆ ಹೇಳಿಕೆ ನೀಡುತ್ತಿರುವ ರಾಜಕೀಯ ಮುಖಂಡರಿಗೆ ಅಬ್ದುಲ್ ಮಜೀದ್ ತಿರುಗೇಟು ನೀಡಿದರು.

Key words: Tipu Express – Wodeyar-Abdul Majeed – Pratap simha