ನಕಲಿ ಕೀ ಬಳಸಿ ಬಸ್ ನಿಲ್ದಾಣದಲ್ಲಿದ್ದ ಸರ್ಕಾರಿ ಬಸ್ ಅನ್ನೇ ಕದ್ದ ಚೋರರು.

ಕಲಬುರಗಿ,ಫೆಬ್ರವರಿ,21,2023(www.justkannada.in): ರಸ್ತೆಗಳಲ್ಲಿ ಅಥವಾ ಮನೆ ಮುಂದೆ ನಿಲ್ಲಿಸುವ ಬೈಕ್, ಕಾರ್​ಗಳನ್ನು ಕದಿಯುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ಖದೀಮರು  ನಕಲಿ ಕೀ ಬಳಸಿ ಬಸ್ ನಿಲ್ದಾಣದಲ್ಲಿದ್ದ  ಸರ್ಕಾರಿ ಬಸ್ ಅನ್ನೇ ಕದ್ದು ಪರಾರಿಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್​ಟಿಸಿಗೆ ಸೇರಿದ್ದ ಬಸನ್ನು ಬೆಳಿಗ್ಗೆ 3.30ರ ವೇಳೆ ಕಳ್ಳರು ಕದ್ದೊಯ್ದಿದ್ದಾರೆ. ಬೀದರ್ ಡಿಪೋ ನಂಬರ್ 2 ಕ್ಕೆ ಸೇರಿದ್ದ ಕೆಎ 38 ಎಫ್ 971 ನಂಬರ್ ನ ಬಸ್, ನಿನ್ನೆ ಬೀದರ್ ನಿಂದ ಚಿಂಚೋಳಿಗೆ ಬಂದಿತ್ತು. ಪ್ರತಿನಿತ್ಯ ಚಿಂಚೋಳಿಯಿಂದ ಬೀದರ್ ಮಾರ್ಗದಲ್ಲಿ ಬಸ್ ಸಂಚರಿಸುತ್ತಿತ್ತು. ಪ್ರತಿನಿತ್ಯ ಚಿಂಚೋಳಿಯಲ್ಲಿ ಹಾಲ್ಟ್ ಮಾಡಿ, ಮುಂಜಾನೆ ಬಸನ್ನು ಚಾಲಕ ಮತ್ತು ನಿರ್ವಾಹಕರು ತೆಗೆದುಕೊಂಡು ಹೋಗುತ್ತಾರೆ.

ನಿನ್ನೆ ರಾತ್ರಿ ಬೀದರ್ ನಿಂದ ಬಂದಿದ್ದ ಬಸನ್ನು ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.  ಆದರೆ ಬೆಳಿಗ್ಗೆ 3.30ರ ವೇಳೆಗೆ ಖದೀಮರು ನಕಲಿ ಕೀ ಬಳಸಿ ಬಸ್ ಅನ್ನು ಕದ್ದೊಯ್ದಿದ್ದಾರೆ. ಬಸ್ ಕಳ್ಳತನವಾಗಿರುವ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇದೀಗ ಬಸನ್ನು ಕದ್ದೋಯ್ದಿರುವ ಆರೋಪಿಗಳ  ಬಂಧನಕ್ಕೆ ಬಲೆ ಬೀಸಿದ್ದಾರೆ.

Key words: Thieves -stole – government bus – fake- key.