ಇಬ್ಬರು ಕನ್ನಡಪರ ಹೋರಾಟಗಾರರಿಗೆ ರೌಡಿಶೀಟರ್ ಪಟ್ಟ: ಸರ್ಕಾರದ ವಿರುದ್ಧ ಆಕ್ರೋಶ.

ಬೆಳಗಾವಿ,ಫೆಬ್ರವರಿ,11,2023(www.justkannada.in): ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಇಬ್ಬರು ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸರು ರೌಡಿಶೀಟರ್ ಓಪನ್ ಮಾಡಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ಸಂಪತ್‌ ಕುಮಾರ್ ದೇಸಾಯಿ, ಅನಿಲ್ ದಡ್ಡಿಮನಿ ವಿರುದ್ಧ ರೌಡಿಶೀಟ್​ ಓಪನ್​ ಮಾಡಲಾಗಿದೆ. 2021ರ ಡಿಸೆಂಬರ್‌ ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌ ಗೆ ನುಗ್ಗಿದ ಕೆಲವರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಮಸಿ ಬಳಿದಿದ್ದರು. ಘಟನೆಯಲ್ಲಿ ಭಾಗಿಯಾಗಿದಕ್ಕೆ ಸಂಪತ್‌ ಕುಮಾರ್‌ ದೇಸಾಯಿ ಮತ್ತು ಅನಿಲ್‌ ದಡ್ಡಿ ಮನಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

ಈ ನಡುವೆ ಇದೀಗ ಅನಿಲ್ ದಡ್ಡಿಮನಿ ವಿರುದ್ಧ ​​ಟಿಳಕವಾಡಿ ಠಾಣೆಯಲ್ಲಿ, ಸಂಪತ್‌ ಕುಮಾರ್ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ರೌಡಿಶೀಟ್​ ಓಪನ್ ಆಗಿದೆ. ಪೊಲೀಸರು ಇಬ್ಬರಿಗೂ ನೋಟಿಸ್​ ನೀಡಿದ್ದಾರೆ.

ಅನಿಲ್ ದಡ್ಡಮನಿಗೆ ಮದುವೆ ಸಂಭ್ರಮವಾಗಿದ್ದು, ಮಾರ್ಚ್ 18 ರಂದು ಅನಿಲ್ ಗೆ ವಿವಾಹ ನಿಶ್ಚಯ ಮಾಡಲಾಗಿದೆ. ಈ ವೇಳೆಯೇ  ರೌಡಿಶೀಟರ್ ಪಟ್ಟಿಯಲ್ಲಿ ಮಗನ ಹೆಸರು ನೋಡಿ ಅನಿಲ್ ಪೋಷಕರಲ್ಲಿ ಆತಂಕ  ಉಂಟಾಗಿದೆ. ಅಲ್ಲದೆ ಕೆಲಸ ಮಾಡುವ ಕಂಪನಿ ಬಳಿ ಬಂದು ಪೊಲೀಸರು ಕಿರುಕುಳ  ನೀಡುತ್ತಿದ್ದಾರೆ ರೌಡಿಶೀಟರ್ ತೆಗೆಯುವಂತೆ  ಅನಿಲ್ ಅಳಲು ತೋಡಿಕೊಂಡಿದ್ದಾರೆ.

ಕನ್ನಡ ಪರ ಹೋರಾಟಗಾರ ಸಂಪತ್‌ಕುಮಾರ್, ಅನಿಲ್‌ ವಿರುದ್ಧ ರೌಡಿಶೀಟ್ ಕೈಬಿಡುವಂತೆ  ಆಗ್ರಹಿಸಿ ಸರ್ಕಾರ, ಪೊಲೀಸರ ಕ್ರಮಕ್ಕೆ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: rowdy sheeter-Kannada fighters- Outrage-against -government.