ಯಲಹಂಕ‌ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್ ಬೆಡ್‌, 50 ಆಮ್ಲಜನಕ‌ ಬೆಡ್ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಮೇ,24,2021(www.justkannada.in):  ಯಲಹಂಕದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ 14 ವೆಂಟಿಲೇಟರ್‌ ಗಳ ಐಸಿಯು ಬೆಡ್ ವ್ಯವಸ್ಥೆ ಹಾಗೂ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ಶಾಲೆಯಲ್ಲಿ ಸ್ಥಾಪಿಸಿರುವ ಆಮ್ಲಜನಕ‌ ಸಹಿತ 50 ಬೆಡ್ ಗಳ ಆರೈಕೆ ಕೇಂದ್ರಕ್ಕೆ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಸೋಮವಾರ ಚಾಲನೆ ನೀಡಿದರು.‌jk

ʼವಿಶ್ವವಾಣಿʼ ಫೌಂಡೇಶನ್ ಹಾಗೂ ʼಅಜೀಂ ಪ್ರೇಮ್ ಜಿʼ ಫೌಂಡೇಶನ್ ಸಹಯೋಗದಲ್ಲಿ ಈ ಕೋವಿಡ್ ಐಸಿಯು ವೆಂಟಿಲೇಟರ್ ವಾರ್ಡ್ ಸ್ಥಾಪನೆಯಾಗಿದ್ದು, ಈ ಭಾಗದ ಸೋಂಕಿತರಿಗೆ ಹೆಚ್ಚು ಅನುಕೂಲವಾಗಲಿದೆ.

ಉದ್ಘಾಟನೆ ನಂತರ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, “ಟೆಕ್ನಾಲಜಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಖಾಸಗಿಯವರ ಸಹಯೋಗದಲ್ಲಿ ಉತ್ತಮ ಆರೋಗ್ಯ ಮೂಲಸೌಕರ್ಯ ಒದಗಿಸುವ ಕೆಲಸ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಆಗುತ್ತಿದೆ. ಈ ನಿಟ್ಟಿನಲ್ಲಿ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್‌ ಅವರ ಪ್ರಯತ್ನ ಶ್ಲಾಘನೀಯ” ಎಂದರು.

ರಾಜ್ಯದ ಉದ್ದಗಲಕ್ಕೂ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಸರಕಾರ ಸರ್ವ ರೀತಿಯ ಕ್ರಮ ವಹಿಸಿದೆ. ಕಾಲಮಿತಿಯೊಳಗೆ ಈ ಕೆಲಸ ಮಾಡಿ ಮುಗಿಸಲಾಗುವುದು. ಸರಕಾರಿ & ಖಾಸಗಿ ಸಹಯೋಗದಲ್ಲಿ ಈ ಮಹತ್ಕಾರ್ಯವನ್ನು ಸಾಧಿಸಲಾಗುವುದು ಎಂದ ಅವರು, ಕೋವಿಡ್‌ ನಂಥ ಸಾಂಕ್ರಾಮಿಕ ಮಾರಿಯನ್ನು ಎದುರಿಸಬೇಕಾದರೆ ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯ ವ್ಯವಸ್ಥೆ ಇರಲೇಬೇಕು ಎಂದರು.

ಯಲಹಂಕದಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ  ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಕ್ಷೇತ್ರದಲ್ಲಿ ಯಾರೊಬ್ಬರೂ ಆರೋಗ್ಯ ಸೇವೆಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ರೀತಿಯ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಜನಸಾಮಾನ್ಯರಿಗೂ ವೆಂಟೆಲೇಟರ್ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದರ ಉಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಆಸ್ಪತ್ರೆಯಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮತ್ತು ಡಾಕ್ಡರ್ಸ್ ಫಾರ್ ಯೂ ಸಂಸ್ಥೆಯ ಸಿಬ್ಬಂದಿ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ.

ಕೋವಿಡ್ ಕೇರ್‌ ಕೇಂದ್ರದಲ್ಲಿ ‌ಸೋಂಕಿತರಿಗೆ ರಿಕ್ರಿಯೇಷನ್ ಗೂ ಅವಕಾಶ ಇದ್ದು ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು  ಕ್ರಿಕೆಟ್ ಆಡುವುದರ‌ ಮೂಲಕ ಅದಕ್ಕೂ ಚಾಲನೆ ನೀಡಿದರು. ಕ್ರಿಕೆಟ್, ವಾಲಿಬಾಲ್, ಕೇರಂ ಇತ್ಯಾದಿ ಆಟಗಳಿಗೂ ಯಲಹಂಕ ದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿಶ್ವನಾಥ್  ತಿಳಿಸಿದರು.DCM -Ashwath Narayan- 14 ventilator bed- 50 oxygen bed- system- Yelahanka Hospital.

ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಆಸ್ಪತ್ರೆ ಮುಖ್ಯಸ್ಥೆ ಡಾ.ಅಸ್ಮಾ, ಡಿಎಚ್ಒ ಡಾ.ಶ್ರೀನಿವಾಸ್, ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮತ್ತು ಡಾಕ್ಟರ್ ಫಾರ್ ಯೂ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

Key words: DCM -Ashwath Narayan- 14 ventilator bed- 50 oxygen bed- system- Yelahanka Hospital.