ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ: ಸತ್ಯ ಹೇಳಿದ್ದೇ ತಪ್ಪಾಯ್ತಾ..? ಶಾಸಕ ರೋಷನ್ ಬೇಗ್ ಕಿಡಿ…

ಬೆಂಗಳೂರು,ಜೂ,19,2019(www.justkannada.in):  ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ.  ನಾನು ಕಾಂಗ್ರೆಸ್ ನಲ್ಲಿನ ಕೆಲ ನಾಯಕರ ಬಗ್ಗೆ ಸತ್ಯವನ್ನು ಹೇಳಿದ್ದೇ ತಪ್ಪಾಯ್ತಾ. ಕೆಲವರಿಗೆ ಸತ್ಯ ಹೇಳಿದರೇ ಅಪರಾಧದಂತೆ ನೋಡ್ತಾರೆ.  ಅದಕ್ಕೆ ನನ್ನನ್ನು ಅಪರಾಧಿ ಮಾಡಿ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಮಾಜಿ ಸಚಿವ ರೋಷನ್ ಬೇಗ್ ಕಿಡಿಕಾರಿದ್ದಾರೆ.

ಪಕ್ಷದಿಂದ ಸಸ್ಪೆಂಡ್ ಆದ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್,, ನಾನು ಮುಚ್ಚಿದ ಕೊಠಡಿಯಲ್ಲಿ ಗುಸುಗುಸು ಮಾತನಾಡುವುದಿಲ್ಲ. ನಾನು ಈಗಲೂ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿದ್ದೇನೆ.  ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಲ್ಲಿದ್ದೇನೆ. ಸಿದ್ದರಾಮಯ್ಯನ ಕಾಂಗ್ರೆಸ್ ನಲ್ಲಲ್ಲ ಎಂದು ಟಾಂಗ್ ನೀಡಿದರು.

ರಾಹುಲ್ ಗಾಂಧಿ ವಿರುದ್ಧ ನಾನು ಹೇಳಿಕೆ ನೀಡುವುದಿಲ್ಲ. ಕೆಲವು ನಾಯಕರಿಗೆ ಸತ್ಯ ಹೇಳೋದು ಅಪರಾಧವಾಗಿದೆ. ರಾಜ್ಯದಲ್ಲಿ ಒಂದೇ ಒಂದು ಸೀಟ್ ಬಂತು ಅಂತ ಟೀಕಿಸಿದ್ರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರವಾಗಿ ಕಾಂಗ್ರೆಸ್ ನಾಯಕರು ಬಹಿರಂಗ ಪ್ರಚಾರ ಮಾಡಿದರು. ಮುನಿಯಪ್ಪ ಸೋಲಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ರು.ತುಮಕೂರಿನಲ್ಲಿ ಮುದ್ದೇಹನುಮೇಗೌಡ ಮೋಸ ಮಾಡಿದರು. ಮೈತ್ರಿ ಮೈತ್ರಿ ಎಂದು ಮೈತ್ರಿ ಅಭ್ಯರ್ಥಿಗಳನ್ನೇ ಸೋಲಿಸಿದರು. ಅವರ ಮೇಲೆ ಯಾಕೆ ಕ್ರಮ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಟೀಕಿಸಿರುವುದು ಕಾರ್ಯಕರ್ತರ ಅಭಿಪ್ರಾಯ. ಚುನಾವಣೆಯಲ್ಲಿ ನನ್ನನ್ನು ಪ್ರಚಾರಕ್ಕಾಗಿ ಕರೆಯಲೇ ಇಲ್ಲ. ಹೀಗಾಗಿ ಕೆಲ ನಾಯಕರಿಗೆ ಸತ್ಯವನ್ನು ಹೇಳುವುದೇ ಅಪರಾಧವಾಗಿದೆ. ಅದಕ್ಕೆ ಕಾಂಗ್ರೆಸ್ ನಿಂದ ಸಸ್ಪೆಂಡ್ ಆಗಿದ್ದೇನೆ. ಸಿದ್ದರಾಮಯ್ಯ ಕ್ಷೇತ್ರದಲ್ಲೇ ಬಿಜೆಪಿಗೆ 9 ಸಾವಿರ ಲೀಡ್ ಬಂತು. ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲೂ ಬಿಜೆಪಿಗೆ ಲೀಡ್ ಬಂತು. ನಾನು ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಲೀಡ್ ಕೊಡಿಸಿದ್ದೇನೆ. ಆದರೂ ನನ್ನನ್ನ ಅಮಾನತು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Key wods: party –loyalist-tell – truth –congress-suspend-Roshan Baig