ಸರ್ಕಾರದಿಂದ ಚಲನಚಿತ್ರ ಮಂದಿರಗಳನ್ನು ತೆರೆಯಲು ಅನುಮತಿಸಿದ್ದರೂ ಪ್ರದರ್ಶಿಸಲು ಚಿತ್ರಗಳೇ ಇಲ್ಲ..!

ಬೆಂಗಳೂರು, ಜುಲೈ 20, 2021(www.justkannada.in): ಲಾಕ್‌ ಡೌನ್ ತೆರವುಗೊಳಿಸಿರುವ ರಾಜ್ಯ ಸರ್ಕಾರ ಸಿನಿಮಾ ಟಾಕೀಸುಗಳನ್ನು ತೆರೆಯಲು ಅನುಮತಿಸಿದ್ದರೂ ಸಹ ಬೆಂಗಳೂರು ನಗರದಲ್ಲಿ ಅನೇಕ ಚಿತ್ರಮಂದಿರಗಳು ಸೋಮವಾರ ಮುಚ್ಚಿದ್ದವು. ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗಳು ಜುಲೈ 31ರ ನಂತರ ಆರಂಭವಾಗಬಹುದು ಎನ್ನುತ್ತಾರೆ ಚಿತ್ರಮಂದಿರಗಳ ಮಾಲೀಕರು. ಏಕೆಂದರೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳ ಬಿಡುಗಡೆಯ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲವಂತೆ.jk

“ನಾವು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಪ್ರದರ್ಶನಕ್ಕಾಗಿ ಚಲನಚಿತ್ರಗಳೇ ಇಲ್ಲ. ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದೇವೆ. ಕನ್ನಡ ಚಲನಚಿತ್ರ ನಿರ್ಮಾಪಕರು ಚಿತ್ರಗಳ ಬಿಡುಗಡೆಯ ದಿನಾಂಕವನ್ನ ಇನ್ನೂ ಘೋಷಿಸಬೇಕಿದೆ,” ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ಅವರ ಪ್ರಕಾರ, ಅನೇಕ ಒಂಟಿ-ಪರದೆ ಚಿತ್ರಮಂದಿರಗಳು ಕನ್ನಡ, ತೆಲುಗು ಹಾಗೂ ತಮಿಳು ಚಲನಚಿತ್ರಗಳ ಬಿಡುಗಡೆಯನ್ನು ಅವಲಂಭಿಸಿವೆ. “ಕೆಲವು ಚಿತ್ರಮಂದಿರಗಳು ಹಳೆಯ ಚಿತ್ರಗಳ ಪ್ರದರ್ಶನದೊಂದಿಗೆ ಇನ್ನು ಕೆಲವು ದಿನಗಳಲ್ಲಿ ತೆರೆಯಬಹುದು, ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ಯಾವುದೇ ಖಾತ್ರಿಯಿಲ್ಲ. ಹಾಗಾಗಿ, ಕೆಲವೇ ಪ್ರೇಕ್ಷಕರಿಗಾಗಿ ಟಾಕೀಸು ತೆರೆಯುವುದು ಅಷ್ಟು ಲಾಭದಾಯಕವಲ್ಲ,” ಎನ್ನುತ್ತಾರೆ.

ರಾಜ್ಯದಲ್ಲಿ ಸುಮಾರು 200 ಏಕ-ಪರದೆ ಚಿತ್ರಮಂದಿರಗಳಿವೆ. ಈ ಎಲ್ಲಾ ಚಲನಚಿತ್ರಮಂದಿರಗಳು 12 ತಿಂಗಳು ಕಾಲ ಮುಚ್ಚಿದ್ದವು. ರಾಜ್ಯ ಸರ್ಕಾರ ಕೇವಲ ಆಸ್ತಿ ತೆರಿಗೆಯಿಂದ ವಿನಾಯಿತಿಯನ್ನು ನೀಡಿ, ತಂತ್ರಜ್ಞರು ಹಾಗೂ ಕಿರಿಯ ಕಲಾವಿದರಿಗೆ ಪರಿಹಾರ ಪ್ಯಾಕೇಜ್‌ ಗಳನ್ನು ಘೋಷಿಸಿತು. “ಬಹುಪಾಲು ಟಾಕೀಸು ಮಾಲೀಕರು ಈ ವಿನಾಯಿತಿ ಘೋಷಿಸುವುದರ ಒಳಗೆ ಆಸ್ತಿ ತೆರಿಗೆಯನ್ನು ಪಾವತಿಸಿದ್ದವು. ಸ್ಥಳೀಯ ಏಜೆನ್ಸಿಗಳು ಈ ತೆರಿಗೆಯನ್ನು ಹಿಂದಿರುಗಿಸಲು ಬಹಳ ಸಮಯ ತೆಗೆದುಕೊಳ್ಳುತ್ತವೆ. ನೀರಿನ ಶುಲ್ಕ ಹಾಗೂ ವಿದ್ಯುತ್ ಶುಲ್ಕಗಳಿಂದ (ಸ್ಥಿರ ಶುಲ್ಕಗಳು) ವಿನಾಯಿತಿ ನೀಡುವಂತೆ ನಾವು ಮಾಡಿದ ಕೋರಿಕೆಯನ್ನು ಸರ್ಕಾರ ಪರಿಗಣಿಸಲಿಲ್ಲ,” ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಖಜಾಂಚಿ ವೆಂಕಟೇಶ್ ರೆಡ್ಡಿ.

ಅನೇಕ ಪ್ರದರ್ಶಕರು ಲಾಕ್‌ ಡೌನ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅರ್ಧ ವೇತನ ಪಾವತಿಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್‌ ನಲ್ಲಿರುವ ನರ್ತಕಿ ಚಿತ್ರಮಂದಿರದ ನಿರ್ವಾಹಕ ನರಸಿಂಹ ಯಾದವ್ ಅವರು ಹೇಳುವಂತೆ ಇಡೀ ಚಿತ್ರಮಂದಿರವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಜ್ ಮಾಡಿದ್ದು, ಪ್ರದರ್ಶನಕ್ಕೆ ಸಿದ್ಧವಾಗಿದೆಯಂತೆ.

ಆದರೆ ತೆಲುಗು ಚಲನಚಿತ್ರಗಳ ಬಿಡುಗಡೆ, ಪ್ರದರ್ಶಕರು ಹಾಗೂ ರಾಜ್ಯ ಸರ್ಕಾರದ ನಡುವಿನ ಮಾತುಕತೆಯನ್ನು ಅವಲಂಭಿಸಿದೆ. ತಮಿಳು ನಾಡಿನಲ್ಲಿ ಜುಲೈ 31ರವರೆಗೂ ಲಾಕ್‌ ಡೌನ್ ಜಾರಿಯಲ್ಲಿರುವ ಕಾರಣದಿಂದಾಗಿ ತಮಿಳು ಚಿತ್ರಗಳು ಈ ವಾರ ಬಿಡುಗಡೆಯಾಗುವುದು ಅನುಮಾನ. ಜೊತೆಗೆ ದೊಡ್ಡ ಬಜೆಟ್‌ ನ ಕನ್ನಡ ಚಲನಚಿತ್ರಗಳೂ ಸಹ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆಯಾಗುವುದು ಅನುಮಾನವೇ.

ಸುದ್ದಿ ಮೂಲ: ಬ್ಯಾಂಗಳೂರ್ ಮಿರರ್

Key words: no films –display- theatres- allowed – government.