ನೀಟ್, ಸಿಇಟಿ ಎಂದಿನಂತೆ ನಡೆಯಲಿವೆ ಎಂದ ಕೇಂದ್ರ ಸಚಿವಾಲಯ

ಬೆಂಗಳೂರು, ಜುಲೈ 24, 2021 (www.justkannada.in): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಇತರ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು (ಸಿಇಟಿ) ಎಂದಿನಂತೆ ನಡೆಸಲಾಗುತ್ತದೆ.

ಈ ಪರೀಕ್ಷೆಗಳನ್ನು ಕೈಬಿಡುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.

ವೈದ್ಯಕೀಯ ಸ್ನಾತಕೋತ್ತರ ಮತ್ತು ಸ್ನಾತಕ ಪದವಿಯ ‘ನೀಟ್‌’ ಪರೀಕ್ಷೆಗಳು ಕ್ರಮವಾಗಿ ಈ ವರ್ಷದ ಸೆಪ್ಟೆಂಬರ್‌ 11 ಮತ್ತು 12ರಂದು ನಡೆಯಲಿವೆ ಎಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.