ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ- ಆರ್.ಅಶೋಕ್

ಬೆಂಗಳೂರು, ಮಾ.8,2024(www.justkannada.in): ರಾಜ್ಯದ ಹಣಕಾಸಿನ ಪರಿಸ್ಥಿತಿ ಪಾತಾಳಕ್ಕೆ ಇಳಿದಿದೆ. ರಾಜ್ಯದಲ್ಲಿ ಬರಗಾಲ ಆವರಿಸಿ ಕುಡಿಯುವ ನೀರಿನ ಸಮಸ್ಯೆ  ಎದುರಾಗಿದೆ. ಆದರೆ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ. ಮನಸ್ಸಿಗೆ ಬಂದಂತೆ ಐದು ಗ್ಯಾರಂಟಿ ಘೋಷಿಸಿ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ಕೆಆರ್​ಎಸ್ ನೀರನ್ನು ತಮಿಳುನಾಡಿಗೆ ಬಿಟ್ಟು ಕೊಟ್ಟಿದೆ. ಈ ಕಾರಣದಿಂದ  ಈಗ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಬವಿಸಿದೆ ಎಂದು ಚಾಟಿ ಬೀಸಿದರು.

ರಾಜ್ಯದಲ್ಲಿದಲಿತ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಕಾಂಗ್ರೆಸ್​ ದಲಿತರನ್ನು ಮುಖ್ಯಮಂತ್ರಿ ಅಲ್ಲ, ಉಪಮುಖ್ಯಮಂತ್ರಿಗಳನ್ನೂ ಮಾಡಲ್ಲ. ಪಾಪ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಎಲ್ಲರು ಕ್ಯೂ ನಿಂತಿದ್ದರೇ ಅತ್ತ ಸಿದ್ದರಾಮಯ್ಯ ಮಗ ಯತೀಂದ್ರ ಅವರು ನಮ್ಮ ಅಪ್ಪನೇ ಐದು ವರ್ಷ ಮುಖ್ಯಮಂತ್ರಿ ಅಂತಿದ್ದಾರೆ. ಡಿ.ಕೆ. ಶಿವಕುಮಾರ್ ಬೇರೆ ಮುಂದಿನ ಬಜೆಟ್ ಅನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡುತ್ತಾರೆ ಅಂತಾರೆ, ಆದರೆ ಸಿದ್ದರಾಮಯ್ಯ ಅಂತಾ ಹೇಳಿಲ್ಲ  ಎಂದು ಲೇವಡಿ ಮಾಡಿದರು.

ಕುಡಿಯುವ ನೀರಿಗೆ ಸಮಸ್ಯೆಯಾದರೆ ರಾಜ್ಯ ಸರ್ಕಾರವೇ ಕಾರಣವಾಗುತ್ತದೆ. ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿರುವುದು ಬಿಟ್ಟರೇ ಏನೂ ಮಾಡಿಲ್ಲ. ನಾವು ಸಾಲ ಮಾಡಲು ಸಾಧ್ಯವಿಲ್ಲದಷ್ಟು ಹಣ ಸಾಲ ಮಾಡಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ತೆರಿಗೆಯನ್ನು ಹೆಚ್ಚಿಸಿದೆ. ಉಳಿದಿರುವುದು ಕೇವಲ ಕುಡುಕರು ಮಾತ್ರ, ಅವರಿಗೆ ಟ್ಯಾಕ್ಸ್ ಹಾಕಬೇಕಷ್ಟೇ ಎಂದು ಹರಿಹಾಯ್ದರು.

key words:  government -failed – problem -drinking water – state- R. Ashok