ಬೇರೆ ಭಾಷೆ ಗೌರವಿಸಿ, ನಮ್ಮ ಭಾಷೆಯನ್ನು ಪ್ರೀತಿಸಿ: ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ನವೆಂಬರ್,1,2022(www.justkannada.in):  ಬೇರೆ ಭಾಷೆಯನ್ನು ಗೌರವಿಸಬೇಕು. ಆದರೆ ನಮ್ಮ ಭಾಷೆಯನ್ನು ಪ್ರೀತಿಸಿ, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯೋತ್ಸವದ ದಿನವನ್ನು ನಾವು ರಾಜ್ಯಾದ್ಯಂತ ಅತಿ ಸಂತೋಷ ಹಾಗೂ ಸಡಗರದಿಂದ ಆಚರಿಸುತ್ತೇವೆ. ಈ ದಿನ ಸರ್ಕಾರದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದಂತಹ ಮಹನೀಯರುಗಳಿಗೆ ಸನ್ಮಾನವನ್ನು ಏರ್ಪಡಿಸಿ ಅವರುಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕನ್ನಡದಲ್ಲಿ ಇನ್ನೂ ಉತ್ತಮವಾದ ಸಾಧನೆಯನ್ನು ಮಾಡಲು ಪ್ರೋತ್ಸಾಹಿಸುವಂತಹ ನಿಟ್ಟಿನಲ್ಲಿ ಸರ್ಕಾರವು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.

ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರುಗಳಿಗೆ ಪ್ರಶಸ್ತಿಯನ್ನು ನೀಡುವಂತಹ ಕಾರ್ಯಕ್ರಮವನ್ನು ಏರ್ಪಡಿಸುವುದರಿಂದ ಅವರು ಇನ್ನಷ್ಟು ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಕನ್ನಡಕ್ಕೆ ಕೊಡುವಂತಹ ಕೊಡುಗೆ ಇನ್ನು ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಈ ಪರಂಪರೆಯು ನಮ್ಮ ವಿಶ್ವವಿದ್ಯಾನಿಲಯದಲ್ಲಿ ನಡೆಯುವಂತಾಗಬೇಕು ಎಂಬುದು ನನ್ನ ಆಶಯ ಎಂದರು.

ಮೈಸೂರು ರಾಜ್ಯವು 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.  ನಾವು ಕನ್ನಡವನ್ನು ನವೆಂಬರ್ ತಿಂಗಳಿನಲ್ಲಿ ಮಾತ್ರ ನೆನೆದು ಉತ್ಸವವನ್ನು ಆಚರಿಸುವುದು ಮುಖ್ಯವಲ್ಲ, ಇದನ್ನು ನಾವು ದಿನದ 24 ಗಂಟೆ ಹಾಗೂ ವರ್ಷದ 365 ದಿನವು ಉತ್ಸವವನ್ನು ಆಚರಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ. ಹೇಗೆಂದರೆ ನಾವು ಕನ್ನಡಕ್ಕೆ ಮೊದಲು ಪ್ರಾಧಾನ್ಯತೆಯನ್ನು ನೀಡುವುದೇ ನಾವು ಉತ್ಸವವನ್ನು ಮಾಡಿದಂತೆ. ನಮ್ಮ ನಾಡು ಸಂಸ್ಕೃತಿಯನ್ನು ಬೇರೆ ನಾಡಿನವರಿಗೆ ಹಾಗೂ ದೇಶ ವಿದೇಶಗಳಲ್ಲಿ ಪರಿಚಯಿಸುವುದು ಸಹ ನಮ್ಮೆಲ್ಲರ ಹೊಣೆಗಾರಿಕೆ ಎಂದು ತಿಳಿಸಿದರು.

ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸಿಕೊಂಡು ಬಂದಿದ್ದಾರೆ. ಜೊತೆಗೆ ನಮ್ಮ ನೆರೆ ರಾಜ್ಯಗಳಾದ ಮುಂಬಯಿ, ದೆಹಲಿ ಮುಂತಾದ ಕಡೆ ಹಾಗೂ ಅಮೇರಿಕಾ, ಸಿಂಗಾಪುರ್, ದುಬೈ, ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿ ನೆಲೆಸಿರುವಂತಹ ಕನ್ನಡಿಗರು ಬಹು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿ ಡಾ.ಸಂಗೀತ ಗಜಾನನ ಭಟ್, ಸಂಸ್ಥೆ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್.ಕರಿಕಲ್, ಪ್ರೊ.ಸಿ.ನಾಗಣ್ಣ ಸೇರಿದಂತೆ ಇತರರು ಇದ್ದರು.

Key words: mysore university-Kannada Rajyotsava-VC-Hemanth kumar