ಮೈಸೂರು ಮಹಾರಾಜರ ಬಗ್ಗೆ ಗುಣಗಾನ: ಓಟಿಗಾಗಿ ಜಯಂತಿಗಳ ಆಚರಣೆ ಎಂದು ಟೀಕಿಸಿದ ಸಚಿವ ಸಿ.ಟಿ ರವಿ….

ಮೈಸೂರು,ಫೆ,15,2020(www.justkannada.in):  ಮೈಸೂರು ಸಂಸ್ಥಾನದಲ್ಲಿ ಹುಟ್ಟಿರುವ ನಾವು ಸೌಭಾಗ್ಯವಂತರು. ಬ್ರಿಟಿಷರ ಕರಾಳ ಆಳ್ವಿಕೆಯ ಸೋಂಕು ತಗುಲದಂತೆ ಮೈಸೂರಿನ ಮಹಾರಾಜರು ನಮ್ಮನ್ನು ಕಾಪಾಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಗುಣಗಾನ ಮಾಡಿದರು.

ಮೈಸೂರಿನಲ್ಲಿ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ  ಸಚಿವ ಸಿ.ಟಿ. ರವಿ, ಈಗ ಪ್ರಜಾಪ್ರಭುತ್ವದ ಕಾಲ, ಅಂದಿನ ಮಹಾರಾಜರ ರಾಜಪ್ರಭುತ್ವದಲ್ಲಿ ಜನರಲ್ಲಿ ಪ್ರೀತಿ ಇತ್ತು. ಅಂದಿನ ರಾಜಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವ ಇತ್ತು. ಆದರೆ ಈಗ ಪ್ರಜಾಪ್ರಭುತ್ವದ ಕಾಲದಲ್ಲೂ ರಾಜಪ್ರಭುತ್ವವಿದೆ. ಜಯಚಾಮರಾಜೇಂದ್ರ ಒಡೆಯರ್ ಆಳ್ವಿಕೆಯ ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಮೈಸೂರು ಬ್ರಾಂಡಿಂಗ್ ಆಗಿತ್ತು. 600ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದ ಸಿಂಹಾಸನವನ್ನು ದೇಶಕ್ಕೆ ವಿಲೀನ ಮಾಡಿದ ಉದಾರ ಮನಸ್ಸು ಮೈಸೂರು ಮಹಾರಾಜರದ್ದು. ಒಂದು ಕ್ಷಣವೂ ಆಲೋಚನೆ ಮಾಡದೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಲೀನಗೊಳಿಸಿದ ದೊಡ್ಡ ಮನುಷ್ಯರು ಮೈಸೂರಿನ ಮಹಾರಾಜರು ಎಂದು ವಿಶ್ಲೇಷಿಸಿದರು.

ಚುನಾವಣೆಯಲ್ಲಿ ಹಣ ಮತ್ತು ಜಾತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಮೈಸೂರಿನ ಅರಸರು ದೂರದರ್ಶಿತ್ವ ಹೊಂದಿದ್ದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಲವಾರು ಮಂದಿಗೆ ಪ್ರಾಮುಖ್ಯತೆ ಸಿಕ್ಕಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಾರಗೊಳಿಸಲು ಮುಂದಾದ ಆಳರಸರಿಗೆ ಪ್ರಾಮುಖ್ಯತೆ ಸಿಕ್ಕಿಲ್ಲ. ಇತಿಹಾಸ ಕೂಡ ಮಾರುಕಟ್ಟೆ ಸರಕಾಗಿದೆ. ಸಾಧನೆಗಳ ಬದಲು ಜಾತಿಯ ಬಲದಲ್ಲಿ ಇತಿಹಾಸವನ್ನು ಅವಲೋಕಿಸಲಾಗುತ್ತಿದೆ. ಈಗ ಜಯಂತಿಗಳನ್ನು ಓಟಿಗಾಗಿ ಆಚರಿಸಲಾಗುತ್ತಿದೆ ಎಂದು ಸಿ.ಟಿ ರವಿ ಟೀಕಿಸಿದರು.

Key words: mysore- minister-ct ravi-Jayachamarajendra Wodeyar –janma shathabdi- Celebration.