ವಿಶ್ವವಿದ್ಯಾಲಯಗಳ ಸ್ಥಳೀಯ ವಿಚಾರಣಾ ಸಮಿತಿಗಳಿಗೆ ವಿಷಯ ತಜ್ಞರನ್ನೇ ನೇಮಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ

ಮೈಸೂರು, ನವೆಂಬರ್ 25, 2022 (www.justkannada.in): ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಳೀಯ ವಿಚಾರಣಾ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ಅಧ್ಯಕ್ಷರು ಅಥವಾ ಸದಸ್ಯರನ್ನಾಗಿ ನೇಮಿಸುವ ವೇಳೆ ವಿಷಯ ತಜ್ಞರನ್ನೇ ನೇಮಿಸುವಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ಸಾಮಾಜಿಕ ಮತ್ತು ನೈಸರ್ಗಿಕ ನ್ಯಾಯದ ಪರಿಪಾಲನೆಯೊಂದಿಗೆ ಶೈಕ್ಷಣಿಕ ಹಿರಿಮೆ ಸಾಧಿಸಲು ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲು ಅವಶ್ಯಕವಾದ ನ್ಯಾಯೋಚಿತ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಸಂಯೋಜನೆ ಪ್ರಕ್ರಿಯೆ ರೂಪಿಸಬೇಕಾದರೆ ಸ್ಥಳೀಯ ವಿಚಾರಣೆ ಸಮಿತಿಗಳಿಗೆ ವಿಷಯ ಪಾರಂಗರನ್ನು ಹಾಗೂ ಶೈಕ್ಷಣಿಕ ತಜ್ಞರನ್ನು ನೇಮಿಸುವ ಅಗತ್ಯವಿದೆ. ಇದನ್ನು ಮನಗಂಡು ವಿವಿಗಳ ಸ್ಥಳೀಯ ವಿಚಾರಣಾ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ಅಧ್ಯಕ್ಷರು ಅಥವಾ ಸದಸ್ಯರನ್ನಾಗಿ ನೇಮಿಸುವ ವೇಳೆ ವಿಷಯ ತಜ್ಞರನ್ನೇ ಆಯ್ಕೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹೀರೇಮಠ ರಾಜ್ಯದ ಎಲ್ಲ ವಿವಿಗಳ ಕುಲಸಚಿವರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಿಸುವ ಕಾರ್ಯನೀತಿ ಸಂಬಂಧ ಸಾಕಷ್ಟು ವಿರೋಧ, ಆರೋಪ, ಆಕ್ಷೇಪಗಳು ಕೇಳಿಬರುತ್ತಿರುವ ಉನ್ನತ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.