ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ, ಶಾಸಕರಾಗಿ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ.

ಬೆಂಗಳೂರು,ಮೇ,22,2023(ww.justkannada.in):  ಇಂದಿನಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ನಡೆಯುತ್ತಿದೆ.

ವಿಧಾನಸಭೆ ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ಪ್ರಮಾಣವಚನ ಸ್ವೀಕರಿಸಿದರು. ಆರ್.ವಿ ದೇಶಪಾಂಡೆ ಅವರಿಗೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಬಳಿಕ ಶಾಸಕರ ಪ್ರಮಾಣ ವಚನಸ್ವೀಕಾರ ಆರಂಭವಾಗಿದ್ದು, ವರುಣಾ ಕ್ಷೇತ್ರದ ಶಾಸಕರಾಗಿ ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕನಕಪುರ ಕ್ಷೇತ್ರದ ಶಾಸಕರಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಕೊರಟಗೆರೆ ಕ್ಷೇತ್ರದ ಶಾಸಕರಾಗಿ ಡಾ.ಜಿ.ಪರಮೇಶ್ವರ್, ದೇವನಹಳ್ಳಿ ಶಾಸಕರಾಗಿ ಕೆ.ಎಚ್. ಮುನಿಯಪ್ಪ, ಸರ್ವಜ್ಞ ನಗರ ಕ್ಷೇತ್ರದ ಶಾಸಕರಾಗಿ ಕೆ.ಜೆ.ಜಾರ್ಜ್, ಬಬಲೇಶ್ವರ ಕ್ಷೇತ್ರದ ಶಾಸಕರಾಗಿ ಎಂ.ಬಿ.ಪಾಟೀಲ್  ಯಮಕನಮರಡಿ ಶಾಸಕರಾಗಿ ಸತೀಶ್​ ಜಾರಕಿಹೊಳಿ ಅವರು, ಬಿಟಿಎಂ ಲೇಔಟ್​ ಶಾಸಕರಾಗಿ ರಾಮಲಿಂಗಾರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು.

ಎರಡು ದಿನಗಳ ಕಾಲ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು ಮೂರನೇ ದಿನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Key words: assembly- Speaker- RV Deshpande- Siddaramaiah –  DK Sivakumar- taking oath