ಹೈವೇ ಯೋಜನೆ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ಮೋದಿಗೆ ಸಲ್ಲಬೇಕು- ಹೆಚ್.ಸಿ ಮಹದೇವಪ್ಪಗೆ ಚರ್ಚೆಗೆ ಆಹ್ವಾನಿಸಿದ ಪ್ರತಾಪ್ ಸಿಂಹ.

ಮೈಸೂರು,ಮಾರ್ಚ್,10,2023(www.justkannada.in):  ಮೈ-ಬೆಂ ಹೈವೇ ಕಾಮಗಾರಿ ಸಂಪೂರ್ಣ ಯಶಸ್ಸು ಪ್ರಧಾನಿ ಮೋದಿಗೆ ಸಲ್ಲಬೇಕು. ಮೋದಿಯನ್ನು ಪ್ರಧಾನಿ ಮಾಡಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಮೈಸೂರು ಬೆಂಗಳೂರು ಹೈವೇ ವಿಚಾರವಾಗಿ ಮಾಜಿ ಸಚಿವ ಮಹದೇವಪ್ಪ ಜೊತೆ ನಾನು ಚರ್ಚಿಸಲು ಸಿದ್ದ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪರಿಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರೋಬೋಟ್ ಮಾಡುವ ಕೆಲಸವನ್ನಷ್ಟೆ ಕಾಂಗ್ರೆಸ್ ಮಾಡಿದೆ. ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳನ್ನು ಸಹಜವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತೆ.  ಅದನ್ನಷ್ಟೇ ಕಾಂಗ್ರೆಸ್ ಮಾಡಿರೋದು.  ಪ್ರಧಾನಿ ಮೋದಿ 9500 ಕೋಟಿ ರೂ ಅನುದಾನ ನೀಡಿದ್ದಾರೆ.  ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಒಂಬತ್ತೂವರೆ ಪೈಸೆ ಕೊಟ್ಟಿದ್ದಾರಾ? ಸಿದ್ದರಾಮಯ್ಯ ಅವರಿಗೆ ಡಿಪಿಆರ್ ಮಾಡೋಕೆ ಬರುತ್ತಾ? ನ್ಯಾಷನಲ್ ವಿಂಗ್ ಸಿ ಕಾನ್ ಎಂಬ ಸಂಸ್ಥೆ ಮೂಲಕ ಡಿಪಿಆರ್ ಮಾಡುತ್ತೆ. ಪ್ಯಾಸೆಂಜರ್ ಕಾರ್ ಯೂನಿಟ್(ಪಿಸಿಯು) 10 ಸಾವಿರಕ್ಕಿಂತಲೂ ಹೆಚ್ಚಾಗಿರುವ ರಸ್ತೆಯನ್ನು ತನ್ನಷ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗುತ್ತೆ.  ಅದಕ್ಕೆ ಸಿದ್ದರಾಮಯ್ಯ, ಡಾ.ಮಹದೇವಪ್ಪ ಅಗತ್ಯವೇ ಇಲ್ಲ ಎಂದು ಟೀಕಿಸಿದರು.

ಇದು ಬೆಂಗಳೂರು – ಮೈಸೂರು ಹೆದ್ದಾರಿ.  ಮೈಸೂರು ತಲುಪುವ ಜಾಗ.  ಮಧ್ಯದಲ್ಲಿ ಬರುವ ರಾಮನಗರ, ಮಂಡ್ಯ ಜಿಲ್ಲೆಯ ಶಾಸಕರು,ಸಂಸದರಿಗೆ ಶ್ರೇಯಸ್ಸು ಸಲ್ಲುವುದಿಲ್ಲ.  ಮಳೆ ಬಂದು ನೀರು ನಿಂತಾಗ ಡಾ.ಮಹದೇವಪ್ಪ ಬರಲಿಲ್ಲ. ಡಿ.ಕೆ.ಸುರೇಶ್ ಗಲಾಟೆ ಮಾಡಿದಾಗ ಮಹದೇವಪ್ಪ ಇದು ವೈಜ್ಞಾನಿಕ ಕಾಮಗಾರಿ ಅಂತ ಹೇಳಲಿಲ್ಲ.  ಹೆದ್ದಾರಿ ಶ್ರೇಯಸ್ಸು ಯಾರಿಗೂ ಸಲ್ಲಬೇಕಿಲ್ಲ.  ಮೋದಿ ಕಾರಣಕ್ಕೆ ನಾನು ಎಂಪಿ ಆಗಿದ್ದೇನೆ,ನಿತಿನ್ ಗಡ್ಕರಿ ಮಂತ್ರಿ ಆಗಿದ್ದಾರೆ. ಇಡೀ ಯೋಜನೆಯ ಶ್ರೇಯಸ್ಸು ಮೋದಿಗೆ ಸಲ್ಲಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಚಾಲಕರ ನಿರ್ಲಕ್ಷ್ಯದಿಂದ ಮೈಸೂರು ಬೆಂಗಳೂರು ಹೈವೇಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ. ರಸ್ತೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡಲಾಗಿದೆ. ವಾಹನ ಸವಾರರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಗೆಲ್ಲಲಿದೆ. ಯಾರು ಏನೇ ಹೇಳಿದರೂ ಜನರು ಬಿಜೆಪಿಗೆ ಮತ ನೀಡಲಿದ್ದಾರೆ. ಹಾಗಾಗಿ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಮುಂದೊಂದು ದಿ‌ನ ಇಡೀ ಹಳೇ ಮೈಸೂರು ಭಾಗ ಬಿಜೆಪಿ ಮಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ  ವಿಶ್ವಾಸ ವ್ಯಕ್ತಪಡಿಸಿದರು.

Key words:  entire- project –  credit – Prime Minister -Modi – Pratap Simha