ಮಾ.12 ರಂದು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ: ಕಾರ್ಯಕ್ರಮಗಳ ವಿವರ ನೀಡಿದ ಸಂಸದ ಪ್ರತಾಪ್ ಸಿಂಹ.

ಮೈಸೂರು,ಮಾರ್ಚ್,10.2023(www.justkannada.in): ಮಾರ್ಚ್ 12 ರಂದು ಮೈಸೂರು –ಬೆಂಗಳೂರು ದಶಪಥ ಹೆದ್ಧಾರಿ ಉದ್ಘಾಟನೆಗೆ ಮಂಡ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಕಾರ್ಯಕ್ರಮಗಳ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾಳಿದ್ದು ನರೇಂದ್ರ ಮೋದಿಯವರು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಬಳಿಕ ಅಲ್ಲಿಂದ ಮಂಡ್ಯದತ್ತ ಹೇಳಿಕಾಪ್ಟರ್ ನಲ್ಲಿ ತೆರಳುತ್ತಾರೆ. ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ. ಬಳಿಕ ಅಧಿಕೃತವಾಗಿ ಮೋದಿಯವರು ಮೈಸೂರು-ಬೆಂಗಳೂರು ಹೈವೇ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ  ಫಲಾನುಭವಿಗಳು ಮಂಡ್ಯದಲ್ಲೇ 2.60 ಲಕ್ಷ ಮಂದಿ ಇದ್ದಾರೆ. ಜೊತೆಗೆ ಅಮೃತ್, ಜಲ ಜೀವನ್, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳು ಇದ್ದಾರೆ. ಅವರನ್ನು ಸೇರಿಸಿ 1.50 ಲಕ್ಷ ಜನ ಸೇರುತ್ತಾರೆ. 12 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಅಂದು ಹೆದ್ದಾರಿ ಉದ್ಘಾಟನೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಶ್ರೀರಂಗಪಟ್ಟಣದಿಂದ ಮಂಡ್ಯವರೆಗೆ 135 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ,1500 ಕೋಟಿ ರೂಪಾಯಿ ವೆಚ್ಚದ ಜಲ ಜೀವನ್ ಮಿಷನ್, ಮೈಸೂರು- ಕುಶಾಲನಗರ ಚತುಷ್ಪಥ ಯೋಜನೆಗೂ ಪ್ರಧಾನಿ ಮೋದಿ ಭೂಮಿಪೂಜೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಿವರಿಸಿದರು.

ಮಂಡ್ಯ ಬಿಜೆಪಿ ಪಾಲಿಗೆ ಗಗನ ಕುಸುಮ ಆಗಿತ್ತು. ಮಂಡ್ಯದಲ್ಲಿ ಈಗಲೂ ನಮ್ಮ ಶಾಸಕರು ಇಲ್ಲ.  ಆದರೂ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದೃಷ್ಟಿಯಿಂದ ಮಂಡ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

Key words:  PM  Modi- arrival – inauguration – Express Highway – March 12-MP Pratap Simha