ಡೆಡ್‌ ಲೈನ್ ತಪ್ಪಿಸಿಕೊಂಡರೆ ದಂಡ ಪಾವತಿಸಬೇಕಾಗುವುದು: ಕರ್ನಾಟಕ ಪಠ್ಯಪುಸ್ತಕ ಮುದ್ರಕರಿಗೆ ಎಚ್ಚರಿಕೆ.

ಬೆಂಗಳೂರು, ಮೇ 6, 2022 (www.justkannada.in): ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳನ್ನು ಸರಬರಾಜು ಮಾಡುವ ಸಂಬಂಧ ನೀಡಿರುವ ಡೆಡ್‌ ಲೈನ್ ಅನ್ನು ಮೀರಿದರೆ ದಂಡ ಪಾವತಿಸಬೇಕಾಗುವುದು ಎಂದು ಪಠ್ಯಪುಸ್ತಕಗಳ ಮುದ್ರಕರನ್ನು ಎಚ್ಚರಿಸಿದೆ.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಪಠ್ಯಪುಸ್ತಕಗಳ ಸರಬರಾಜಿನಲ್ಲಿ ವಿಳಂಬವಾದರೆ ಮುದ್ರಕರು ದಂಡ ಪಾವತಿಸಬೇಕಾಗುವುದು. “ಮುದ್ರಕರ ಕೋರಿಕೆಯ ಮೇರೆಗೆ ನಾವು ಈ ವರ್ಷ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಆದರೂ ಸಹ ಮುದ್ರಣ ಕೆಲಸದಲ್ಲಿ ವಿಳಂಬವಾದರೆ ದಂಡ ವಿಧಿಸಲಾಗುವುದು,” ಎಂದರು.

ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (ಕೆಟಿಬಿಎಸ್)ನ ಅಧಿಕಾರಿಗಳು ವಿವರಿಸಿರುವ ಪ್ರಕಾರ ದಂಡ ವಿಧಿಸುವ ನಿಯಮವನ್ನು ಟೆಂಡರ್ ಅಧಿಸೂಚನೆಯಲ್ಲಿಯೇ ವಿವರಿಸಲಾಗಿದೆ. “ದಂಡದ ಮೊತ್ತ ಒಟ್ಟು ಬಿಲ್ ಮೊತ್ತದ ಶೇ.೧ರಷ್ಟಿದ್ದು, ವಿಳಂಬಕ್ಕೆ ಕಾರಣಗಳು ಹಾಗೂ ಎಷ್ಟು ದಿನ ವಿಳಂಬವಾಗಿದೆ ಎಂಬುದನ್ನು ಆಧರಿಸಿರುತ್ತದೆ, ಇನ್ನೂ ಹೆಚ್ಚಾದರೂ ಆಗಬಹುದು,” ಎನ್ನುವುದು ಓರ್ವ ಅಧಿಕಾರಿಯ ಅಭಿಪ್ರಾಯವಾಗಿದೆ.

ಕೆಟಿಬಿಎಸ್ ನೀಡಿರುವ ಡೆಡ್‌ ಲೈನ್‌ನ ಪ್ರಕಾರ ಮುದ್ರಕರು ಪಠ್ಯಪುಸ್ತಕಗಳನ್ನು, ಅವರಿಗೆ ಸಿಡಿ ನೀಡಿದ ೧೦೦ ದಿನಗಳ ಒಳಗೆ, ಅಂದರೆ ಮೇ ೧೪ರೊಳಗೆ ಸರಬರಾಜು ಮಾಡಬೇಕು. ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ೫೩೦ ವಿವಿಧ ವಿಷಯಗಳ ಸುಮಾರು ಆರು ಕೋಟಿ ಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. ಆದರೆ ಮುದ್ರಣ ಘಟಕಗಳ ಮಾಲೀಕರು ಮುದ್ರಣಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು ಲಭ್ಯವಾಗುತ್ತಿಲ್ಲ ಎಂದು ಕಾರಣ ನೀಡಿ ಪಠ್ಯಪುಸ್ತಕಗಳ ಮುದ್ರಣ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಕರ್ನಾಟಕ ಪಠ್ಯಪುಸ್ತಕ ಮುದ್ರಕರ ಸಂಘವು ರಾಜ್ಯ ಸರ್ಕಾರವನ್ನು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದು, ಪಠ್ಯಪುಸ್ತಕಗಳ ಮುದ್ರಣದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವ ತಮಿಳುನಾಡು ಸರ್ಕಾರದ ಅತೀ ದೊಡ್ಡ ಸಂಸ್ಥೆಯೊಂದಿಗೆ ಮಾತನಾಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಆದರೆ ಕೆಟಿಬಿಎಸ್‌ ನ ಅಧಿಕಾರಿಗಳು ತಿಳಿಸಿರುವ ಪ್ರಕಾರ ಶೇ.೬೮ ರಷ್ಟು ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ಶೇ.೫೮ರಷ್ಟು ಈಗಾಗಲೇ ಸರಬರಾಜು ಮಾಡಲಾಗಿದೆ.

ಈ ವರ್ಷ ಪಠ್ಯಪುಸ್ತಕಗಳ ಕೊರತೆ ಇರುವುದಿಲ್ಲ

ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಒಂದು ತಿಂಗಳ ಮಟ್ಟಿಗೆ ಪಠ್ಯಪುಸ್ತಕಗಳ ಸರಬರಾಜಿನಲ್ಲಿ ವ್ಯತ್ಯಯವಾದರೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. “ತರಗತಿಗಳು ಮೇ ೧೬ರಂದು ಆರಂಭವಾಗುತ್ತವೆ. ಆದರೆ ಮೊದಲ ತಿಂಗಳು ಹಿಂದಿನ ಸಾಲಿನಲ್ಲಿ ಕಲಿತಿರುವ ವಿಷಯಗಳನ್ನು ಮೆಲುಕು ಹಾಕುವ ಕಡೆ ಹೆಚ್ಚು ಗಮನ ನೀಡಲಾಗುತ್ತದೆ ಹಾಗೂ ನಾವು ಅದಕ್ಕೆ ಪ್ರತ್ಯೇಕ ಪಠ್ಯ ಸಾಮಗ್ರಿಯನ್ನು ಸರಬರಾಜು ಮಾಡಿದ್ದೇವೆ,” ಎಂದಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: deadline – missed, – pay – fine-Warning –Karnataka- Textbook -Printers