ಮಲ್ಲೇಶ್ವರದಲ್ಲಿ ಮಹಾ ಶಿವರಾತ್ರಿ : ನೃತ್ಯ, ಹಾಸ್ಯ, ಸಂಗೀತ ಮೇಳೈಸಿಲಿದೆ ಸಾಂಸ್ಕೃತಿಕ ಜಾಗರಣೆ…

ಬೆಂಗಳೂರು,ಮಾರ್ಚ್,10,2021(www.justkannada.in):  ಶಿವರಾತ್ರಿ ಹಬ್ಬದ ಪ್ರಯುಕ್ತ ಡಾ.ಸಿ.ಎನ್.‌ಅಶ್ವತ್ಥನಾರಾಯಣ್ ಫೌಂಡೇಷನ್‌ ವತಿಯಿಂದ ಗುರುವಾರ (ಮಾ.11) ಇಡೀ ರಾತ್ರಿ ಮಲ್ಲೇಶ್ವರದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ವಿಭಿನ್ನವಾಗಿ ಏರ್ಪಡಿಸಲಾಗಿದೆ. ಇಡೀ ರಾತ್ರಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.jk

ನಂಬಿಕೆ, ಆಚಾರ- ವಿಚಾರಗಳಲ್ಲಿ ಶ್ರದ್ಧೆ ಇಟ್ಟು ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಈ ಫೌಂಡೇಷನ್‌, ಈ ಬಾರಿ ಮಲ್ಲೇಶ್ವರದ 5ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಶಾಲೆಯ ಆಟದ ಮೈದಾನದಲ್ಲಿ ಉತ್ಸವಕ್ಕೆ ಸಂಜೆ 7ಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಚಾಲನೆ ನೀಡಲಿದ್ದಾರೆ.

ಸಂಗೀತ ಮತ್ತು ನೃತ್ಯದ ಮೂಲಕ ಶಿವಸ್ಮರಣೆ ಮಾಡಿಕೊಂಡು ಭಕ್ತರಿಗೆ ಮುದವುಂಟು ಮಾಡುವುದರ ಜತೆಗೆ, ಜಾಗತಿಕವಾಗಿ ಹೆಸರು ಮಾಡಿರುವ ಅನೇಕ ಖ್ಯಾತ ಕಲಾವಿದರು ಉತ್ಸವದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದು, ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳ್ಳಲಿವೆ.

ಏನೇನು ಕಾರ್ಯಕ್ರಮ?

ಪುಸ್ತಕಮ್‌ ರಮಾ ಮತ್ತು ಡಾ.ಸುಮಾ ಸುಧೀಂದ್ರ ಮತ್ತು ವೀಣಾ ಮೂರ್ತಿ ಅವರಿಂದ ಫ್ಯೂಷನ್‌ ಸಂಗೀತವಿದೆ. ರಿಚರ್ಡ್‌ ಲೂಯೀಸ್‌ ಅವರ ನಗೆಯ ಕಚಗುಳಿ ಇರುತ್ತದೆ. ಸುನೀತಾ ಅವರ ಜಾನಪದ ಮತ್ತು ರತ್ನಪದಗಳ ರಸದೌತಣವಿದೆ.

ಜತೆಗೆ ನವಿರಾದ ಹಾಸ್ಯದಿಂದ ಜನಮನ ಸೂರೆಗೊಂಡಿರುವ ಗಂಗಾವತಿ ಪ್ರಾಣೇಶ್ ಹಾಗೂ ಪ್ರೊ.ಕೃಷ್ಣೇಗೌಡ ಅವರಿಂದ ಹಾಸ್ಯ ಕಾರ್ಯಕ್ರಮವಿದೆ. ಇದಾದ ಮೇಲೆ ಮಹೇಶ್‌ ಲಲಿತ ಕಲಾ ತಂಡದಿಂದ ಅಮೋಘ ನೃತ್ಯವಿರುತ್ತದೆ.

ಮೈಸೂರು ದಸರಾ ಸೇರಿದಂತೆ ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ಸಂಗೀತ ಸುಧೆ ಹರಿಸಿ ಹೆಸರು ಮಾಡಿರುವ ಬಾಲಕ ರಾಹುಲ್‌ ವೆಲ್ಲಾಲ್‌ ಅವರ ಕರ್ನಾಟಕ ಸಂಗೀತ ಕಛೇರಿಯನ್ನೂ ಏರ್ಪಡಿಸಲಾಗಿದೆ. ಹಾಗೆಯೇ ಪ್ರವೀಣ್‌ ಡಿ.ರಾವ್‌ ಅವರ ತಂಡದಿಂದ ʼಚಕ್ರಫೋನಿಕ್ಸ್‌ʼ ಝಲಕ್‌ ಇದೆ.Bangalore-Maha Shivaratri – Cultural program-ashwath narayan

ಖ್ಯಾತ ನೃತ್ಯಪಟು ಶಮಾ ಕೃಷ್ಣ ಮತ್ತು ತಂಡದಿಂದ ಗಿರಿಜಾ ಕಲ್ಯಾಣ ನೃತ್ಯರೂಪಕ ಹಾಗೂ ಪ್ರಥಮಾ ಪ್ರಸಾದ್‌- ಸೂರ್ಯ ರಾವ್‌ ತಂಡದವರಿಂದ ಕಥಕ್-ಕೂಚುಪುಡಿ ನೃತ್ಯದ ಜುಗಲ್‌ಬಂದಿ, ತಾರಕ್‌ ಡಾನ್ಸ್‌ ತಂಡದಿಂದ ಚಲನಚಿತ್ರ ಗೀತೆಗಳ ನೃತ್ಯ ವೈಭವ, ಆಯನ್‌ ಡಾನ್ಸ್‌ ತಂಡದಿಂದ ಭರತನಾಟ್ಯ- ಫ್ಯೂಷನ್‌ ನೃತ್ಯ ಹಾಗೂ ಸಮನ್ವಿತಾ ಶರ್ಮಾ ಮತ್ತು ತಂಡದಿಂದ ಸಿನಿಮಾ ಗೀತೆಗಳಿಗೆ ನೃತ್ಯ ಕಾರ್ಯಕ್ರಮವೂ ಇರುತ್ತದೆ.

ಹೀಗೆ ವೈವಿಧ್ಯಮಯ ಕಲಾವಿದರಿಂದ ಅಷ್ಟೇ ವಿಭಿನ್ನ ಹಾಗೂ ಅಪರೂಪದ ಕಲಾ ಪ್ರದರ್ಶನಗಳನ್ನು ಮಹಾ ಶಿವರಾತ್ರಿ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ನೃತ್ಯ, ಹಾಸ್ಯ, ಸಂಗೀತ ಮೇಳೈಸಿರುವ ಈ ಸಾಂಸ್ಕೃತಿಕ ಜಾಗರಣೆಯಲ್ಲಿ ಸರ್ವರೂ ಭಾಗಿಯಾಗಬೇಕು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಕೋರಿದ್ದಾರೆ.

Key words: Bangalore-Maha Shivaratri – Cultural program-ashwath narayan