ಮೈಸೂರು,ಆಗಸ್ಟ್,5,2026 (www.justkannada.in): ಕಬಿನಿ ನದಿಗೆ ಎಚ್.ಡಿ.ಕೋಟೆ ಹಾಗೂ ಸರಗೂರು ಭಾಗಗಳಿಂದ ಮಾನವ ತ್ಯಾಜ್ಯ, ಒಳಚರಂಡಿ ನೀರು, ಕೋಳಿ ಫಾರಂ ಹಾಗೂ ಇತರೆ ಕಲುಷಿತ ನೀರು ಸೇರುತ್ತಿದ್ದು, ನದಿಯ ನೀರಿನ ಗುಣಮಟ್ಟ ಗಂಭೀರವಾಗಿ ಹದಗೆಟ್ಟಿದೆ ಎಂದು ‘ಸೇವ್ ಕಬಿನಿ’ ತಂಡ ಆರೋಪಿಸಿದೆ.
ಐದು ಸ್ಥಳಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ ಬಳಿಕ ಬಂದ ವರದಿಯಲ್ಲಿ ನೀರು ಕುಡಿಯಲು ಹಾಗೂ ಸ್ನಾನಕ್ಕೆ ಯೋಗ್ಯವಿಲ್ಲ ಎಂಬ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ ಎಂದು ತಂಡ ತಿಳಿಸಿದೆ. ಶುದ್ಧೀಕರಣವಿಲ್ಲದೆ ಈ ನೀರನ್ನು ಬಳಸಿದರೆ ಕಿಡ್ನಿ ಸಮಸ್ಯೆ, ಕಿಡ್ನಿ ಸ್ಟೋನ್ ಸೇರಿದಂತೆ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರ ವರದಿ ಉಲ್ಲೇಖಿಸಿದೆ.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳಲ್ಲಿ ಎಸ್ ಟಿಪಿ (STP) ಹಾಗೂ ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಕಲುಷಿತ ನೀರು ನೇರವಾಗಿ ಕಬಿನಿಗೆ ಸೇರುತ್ತಿದೆ. ಕೆಲವು ರೆಸಾರ್ಟ್ಗಳೂ ತ್ಯಾಜ್ಯವನ್ನು ನದಿಗೆ ಬಿಡುತ್ತಿವೆ ಎಂದು ಆರೋಪಿಸಿರುವ ತಂಡ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದೆ.
ಕಬಿನಿ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಿ ಮಾತ್ರ ಕುಡಿಯುವ ನೀರಾಗಿ ಬಳಸಬೇಕು. ಸರ್ಕಾರ ತಕ್ಷಣ ಎಸ್ಟಿಪಿ ಘಟಕಗಳನ್ನು ಸ್ಥಾಪಿಸಿ ನದಿ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಕರ್ನಾಟಕ ಮುಖ್ಯಮಂತ್ರಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿರುವ ‘ಸೇವ್ ಕಬಿನಿ’ ತಂಡ, ಕಬಿನಿ ಜಲಾಶಯವನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಜೊತೆಗೆ ನೀರಿನ ಮಾದರಿಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಕಲುಷಿತ ನೀರಿನ ಬಗ್ಗೆ ಎಚ್ಚರಿಕೆ ನೀಡಿತು.
Key words: Mysore, Kabini water, polluted, ‘Save Kabini, team






