Friday, November 6, 2026

Dasara Wishes

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳ...
Happy Dasara
Home Front Page ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಸ ಪರ್ವ ಆರಂಭ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಸ ಪರ್ವ ಆರಂಭ: ಸಿಎಂ ಡಿ.ಕೆ ಶಿವಕುಮಾರ್

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ: ಸಿಎಂ ಡಿ.ಕೆ ಶಿವಕುಮಾರ್

ರಾಮನಗರ, ನವೆಂಬರ್,6,2026 (www.justkannada.in):  ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಈಗ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ. ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳ ಕಾಮಗಾರಿಗಳು ನಡೆಯುತ್ತಿದ್ದು, ನೀರಾವರಿ ಕ್ಷೇತ್ರಕ್ಕೆ ತಾವು ಉಪಮುಖ್ಯಮಂತ್ರಿಯಾಗಿದ್ದಾಗ ₹2,000 ಕೋಟಿ ಅನುದಾನ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ರಾಮನಗರದ ನಗರದ‌ ಜ್ಯೂನಿಯರ್ ಕಾಲೇಜು‌ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಸಮಾರಂಭವನ್ನು ಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತ ಸಾಕ್ಷಿ ಗುಡ್ಡೆಗಳನ್ನು ನಿರ್ಮಿಸುವುದು ನಮ್ಮ ಉದ್ದೇಶ. ದೇಶದ ಒಂದು ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳು ಇರುವುದಾದರೆ ಅದು ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಮ್ಮೆ ನಮಗಿದೆ” ಎಂದರು.

“ಜನರು ಚಿಕಿತ್ಸೆಗಾಗಿ ಬೆಂಗಳೂರು ನಗರಕ್ಕೆ ತೆರಳುವ ಅಗತ್ಯವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ₹15 ಲಕ್ಷದಿಂದ ₹30 ಲಕ್ಷದವರೆಗೆ ವೆಚ್ಚವಾಗುವ ಸಂದರ್ಭಗಳಿದ್ದು, ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯವಾಗಿದೆ” ಎಂದರು.

“ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಿಂದೆಯೇ ಅನುಮೋದನೆ ನೀಡಲಾಗಿತ್ತು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅದನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಲಾಗಿತ್ತು. ನಾನು ಬಿಡಲಿಲ್ಲ. ರಾಮನಗರದ ಜನರ ಬೇಡಿಕೆಯಂತೆ ಜಿಲ್ಲೆಯಲ್ಲಿ ಮತ್ತೊಂದು ವೈದ್ಯಕೀಯ ಕಾಲೇಜು ಸ್ಥಾಪನೆಗೂ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.

“ಜಿಲ್ಲೆಯ ಹಾಲು ಉತ್ಪಾದಕರ ಬದುಕಿಗೆ ಆರ್ಥಿಕ ಬಲ ನೀಡಲು ಕನಕಪುರದ ಶಿವನಹಳ್ಳಿಯಲ್ಲಿ ಹಾಗೂ ರಾಮನಗರದಲ್ಲಿ ಒಟ್ಟು ₹1,400 ಕೋಟಿ ವೆಚ್ಚದಲ್ಲಿ ಹಾಲಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಗಳು ರೈತರ ಬದುಕಿಗೆ ನೀಡಿದ ಕೊಡುಗೆಗಳಾಗಿದ್ದು, ಈ ಅಭಿವೃದ್ಧಿ ಕಾರ್ಯಗಳನ್ನು ಜನರು ಗಮನಿಸಬೇಕು. ರೈತರ ಕಷ್ಟಗಳನ್ನು ಅರಿತು ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹7 ಹೆಚ್ಚಿಸಲಾಗಿದೆ. ಇದರಲ್ಲಿ ಪ್ರತಿ ಲೀಟರ್‌ಗೆ ₹1 ಅನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ರೈತರ ಬದುಕು ಸುಧಾರಿಸಲು ಸರ್ಕಾರ ಬದ್ಧವಾಗಿದೆ” ಎಂದರು.new era cm-dk shivakumar-dks cm dk shivakumar dks

“ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜದ ಗೌರವವನ್ನು ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರಧ್ವಜದ ಪಕ್ಕದಲ್ಲಿ ಕನ್ನಡ ಧ್ವಜ ಹಾರಿಸಲು ಅವಕಾಶ ಕಲ್ಪಿಸುವ ಕಾನೂನು ತಿದ್ದುಪಡಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಪ್ರಯತ್ನಿಸಲಾಗುವುದು. ಕೆಂಪು-ಹಳದಿ ಬಣ್ಣಗಳು ಕನ್ನಡ ನಾಡಿನ ಹೆಮ್ಮೆ ಮತ್ತು ಐಕ್ಯತೆಯ ಸಂಕೇತಗಳಾಗಿವೆ. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ಕನ್ನಡಿಗರೆಲ್ಲರೂ ಭಾಷೆಯನ್ನು ಗೌರವದಿಂದ ಉಳಿಸಿ ಬೆಳೆಸಬೇಕು” ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

“ಜಿಲ್ಲೆಯ ಜನರು ತಮ್ಮನ್ನು ಮುಖ್ಯಮಂತ್ರಿ ಎಂದು ಮಾತ್ರವಲ್ಲದೆ, ತಮ್ಮ ಮನೆಯ ಮಗ ಹಾಗೂ ಪ್ರಜಾಸೇವಕನಾಗಿ ಕಾಣಬೇಕು. ಅಧಿಕಾರದ ದರ್ಪದಿಂದ ಜಿಲ್ಲೆಗೆ ಬಂದವನಲ್ಲ. ರಾಜ್ಯದಲ್ಲಿ ಯಾವುದೇ ಸ್ಥಾನದಲ್ಲಿದ್ದರೂ ಬೆಂಗಳೂರು ಗಡಿ ದಾಟಿ ಜಿಲ್ಲೆಗೆ ಬಂದು ಜನರ ಸೇವೆ ಮಾಡುತ್ತೇನೆ. ಜೀವನ ಶಾಶ್ವತವಲ್ಲ; ಮನುಷ್ಯ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಬಗ್ಗೆ ಪರಮಾತ್ಮನಿಗೂ ಅಂತರಾತ್ಮಕ್ಕೂ ಮಾತ್ರ ಸಂಪೂರ್ಣ ಅರಿವಿರುತ್ತದೆ. ಸುಳ್ಳು ಹೇಳಿ, ಜನರಿಗೆ ಆಕಾಶ ತೋರಿಸುವುದಕ್ಕಿಂತ ನೈಜ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರ ನೀಡಬೇಕು” ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ರೈತನ ಬಗ್ಗೆ ಮಾತನಾಡುವವರು ಅವರ ಬದುಕು ತಿಳಿಯಬೇಕು

“ಜಿಲ್ಲೆಯ ಜನರು ಬಾಲಕೃಷ್ಣ, ಯೋಗೇಶ್ವರ್, ಇಕ್ಬಾಲ್, ಹುಸೇನ್ ಸೇರಿದಂತೆ ನಾಲ್ವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ರವಿ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದಾರೆ. ಸುರೇಶ್ ಅವರು ಹಿಂದಿನ ಚುನಾವಣೆಯಲ್ಲಿ ಸೋಲಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಅವಕಾಶ ಸಿಕ್ಕಾಗ ಜನಪ್ರತಿನಿಧಿಗಳು ಮಾಡಿದ ಕೆಲಸಗಳೇ ಅವರ ಸಾಧನೆಗೆ ಸಾಕ್ಷಿಯಾಗುತ್ತವೆ. ಹಾಲು ಉತ್ಪಾದಕರ ಪರವಾಗಿ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ರೈತರ ಸಂಕಷ್ಟ, ಸಗಣಿ, ಹುಲ್ಲು, ಹಿಂಡಿ ಸೇರಿದಂತೆ ಹೈನುಗಾರಿಕೆಯ ಕಷ್ಟಗಳು ರೈತರಿಗೆ ಮಾತ್ರ ಗೊತ್ತು. ರೈತರ ಬದುಕಿನ ಬಗ್ಗೆ ಮಾತನಾಡುವವರು ಅವರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು” ಎಂದರು.

500 ಕೋಟಿ ರೂ. ವೆಚ್ಚದ ಯೋಜನೆಗಳು

“ರಾಮನಗರ ಪಟ್ಟಣದ ಅಭಿವೃದ್ಧಿಗೆ ಕಳೆದ ವರ್ಷ ₹500 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 100 ಎಕರೆ ಜಮೀನು ಗುರುತಿಸಲಾಗಿದ್ದು, ನಿವೇಶನ ಹಂಚಿಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಈ ಯೋಜನೆಗೆ ಬೇಕಾದ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ. ಮುಂದಿನ ಒಂದು ವರ್ಷದೊಳಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡುವ ಕೆಲಸವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ” ಎಂದು ಹೇಳಿದರು.

ಬರಗಾಲದ ಸಂದರ್ಭದಲ್ಲಿ ರೈತರಿಗೆ ನೆರವು

“ಬರಗಾಲದ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಹಾಲಿನ ದರ ಹೆಚ್ಚಳದ ಜೊತೆಗೆ ಸಹಕಾರ ಸಂಘಗಳಿಗೆ ಪ್ರೋತ್ಸಾಹ ನೀಡಲಾಗಿದೆ. ರೈತರ ಬದುಕನ್ನು ಕಠಿಣಗೊಳಿಸುವ ಬದಲು ಅವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೂ ಅವಮಾನ ಎಂಬ ಮಾತನ್ನು ಉಲ್ಲೇಖಿಸಿ, ಜನರ ಬದುಕಿನಲ್ಲಿ ಬದಲಾವಣೆ ತರುವ ಕೆಲಸವೇ ನಿಜವಾದ ಸಾಧನೆ” ಎಂದು ಹೇಳಿದರು.ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ: ಸಿಎಂ ಡಿ.ಕೆ ಶಿವಕುಮಾರ್

“ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರದ ಹೆಸರು ಜಿಲ್ಲೆಯ ಜನರ ಬದುಕಿನೊಂದಿಗೆ ಬೆಸೆದುಕೊಂಡಿದೆ. ರಾಮನಗರವನ್ನು ಕೇಂದ್ರ ಸ್ಥಳವಾಗಿ ಉಳಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಹೊಸ ರೂಪ ನೀಡಲಾಗುತ್ತಿದೆ. ಜಿಲ್ಲೆಯ ಹೆಸರನ್ನು ಬದಲಾಯಿಸುವ ವಿಚಾರದಲ್ಲಿ ಜನರ ಭಾವನೆಗಳಿಗೆ ಗೌರವ ನೀಡಲಾಗುವುದು” ಎಂದು ತಿಳಿಸಿದರು.

“ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗಿದ್ದು, ತಮಿಳುನಾಡು ಮತ್ತು ಮಂಡ್ಯ ಗಡಿಭಾಗಗಳಲ್ಲಿಯೂ ಒಂದು ಕೋಟಿ, ಎರಡು ಕೋಟಿ ಹಾಗೂ 50 ಲಕ್ಷ ರೂಪಾಯಿಗಳವರೆಗೆ ಬೆಲೆ ಇರುವ ಸಂದರ್ಭಗಳಿವೆ. ಈ ಬೆಳವಣಿಗೆಗೆ ಅಭಿವೃದ್ಧಿ ಕಾಮಗಾರಿಗಳು ಕಾರಣವಾಗಿವೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ರೀತಿಯ ಅಭಿವೃದ್ಧಿ ಕಾರ್ಯಗಳು ಏಕೆ ಸಾಧ್ಯವಾಗಲಿಲ್ಲ ಎಂಬುದನ್ನು ಜನರು ಪ್ರಶ್ನಿಸಬೇಕು” ಎಂದರು.

“ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನದಿ ಪಕ್ಕದ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಮಾಗಡಿಯಲ್ಲಿ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಕನಕಪುರದಲ್ಲಿಯೂ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ರೈತರ ಬದುಕನ್ನು ಹಸನಾಗಿಸಲು ನೀರಾವರಿ ಯೋಜನೆಗಳು ಪ್ರಮುಖವಾಗಿವೆ. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಹೊಸ ಯೋಜನೆಗಳನ್ನು ರೂಪಿಸಲಾಗಿದ್ದು, ವೈದಿ ಗುಡ್ಡ ಏತ ನೀರಾವರಿ ಯೋಜನೆಗೂ ಮರುಜೀವ ನೀಡಲಾಗಿದೆ” ಎಂದರು.

“ಚನ್ನಪಟ್ಟಣ, ಮಾಗಡಿ ಮತ್ತು ಇತರ ಕ್ಷೇತ್ರಗಳಲ್ಲಿನ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಟೊಯೋಟಾ ಸೇರಿದಂತೆ ಕೈಗಾರಿಕಾ ಸಂಸ್ಥೆಗಳ ಹೂಡಿಕೆಗಳ ಮೂಲಕ ಸ್ಥಳೀಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು” ಎಂದರು.

“ಗ್ರಾಮೀಣ ಭಾಗದ ಮಕ್ಕಳಿಗೆ ಬೆಂಗಳೂರಿನಲ್ಲಿರುವಂತೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಪಂಚಾಯಿತಿ ಕೇಂದ್ರಗಳಲ್ಲಿ 25ರಿಂದ 30 ಶಾಲೆಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ಶಾಲೆಗಳನ್ನು ನಿರ್ಮಿಸಲಾಗುವುದು. ಕೆಲವು ಶಾಲೆಗಳಿಗೆ ₹12ರಿಂದ ₹15 ಕೋಟಿ ವೆಚ್ಚವಾಗಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಜನರು ಬೆಂಗಳೂರಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಿಸುವುದು ಸರ್ಕಾರದ ಗುರಿಯಾಗಿದೆ” ಎಂದು ತಿಳಿಸಿದರು.development jk02_new jk02 new

ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಚನ್ನಪಟ್ಟಣ, ರಾಮನಗರ, ಕನಕಪುರ ಮತ್ತು ಮಾಗಡಿ ಸೇರಿದಂತೆ ಯಾವುದೇ ಪ್ರದೇಶದಲ್ಲಿ ಕೋಮು ಗಲಭೆಗಳಿಗೆ ಅವಕಾಶ ನೀಡದೆ ಎಲ್ಲ ಸಮುದಾಯಗಳ ಜನರು ಸೌಹಾರ್ದದಿಂದ ಬದುಕುವ ವಾತಾವರಣ ನಿರ್ಮಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಸೇರಿದಂತೆ ಸಾಮಾಜಿಕ ನ್ಯಾಯದ ಕಾರ್ಯಗಳಿಗೆ ಸರ್ಕಾರ ಬೆಂಬಲ ನೀಡಿದೆ. ಹಿಂದಿನ ದಿನಗಳಲ್ಲಿ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಈಗ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಗೌರವಿಸಿ ಕೆಲಸ ಮಾಡಲಾಗುತ್ತಿದೆ” ಎಂದರು.

ಮೇಕೆದಾಟು; ಕರ್ನಾಟಕದ ಹಕ್ಕನ್ನು ಯಾರೂ ತಡೆಯಲು ಸಾಧ್ಯವಿಲ್ಲ

“ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮ್ಮ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಯೋಜನೆಯನ್ನು ಮುಂದುವರಿಸಲು ಅವಕಾಶ ನೀಡಿದೆ. ಕರ್ನಾಟಕದ ಹಕ್ಕನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯೋಜನೆಗೆ ಪರ್ಯಾಯ ಅರಣ್ಯ ಭೂಮಿ ಒದಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಲಾಗುವುದು. ಮೇಕೆದಾಟು ಯೋಜನೆಯ ಕಚೇರಿಯ ಕಾರ್ಯಾರಂಭವೂ ಆರಂಭವಾಗಿದೆ” ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

 

English Summary
Title

A new era of development begins in Bengaluru South district: CM D.K. Shivakumar

Short Description
"For the past 25 years, the situation in the district was such that it was not possible to lay the foundation stone for even a single project. However, a new era of development has now begun in the Bengaluru South district. Construction work for four medical colleges is currently underway in the district, and a grant of ₹2,000 crore was allocated to the irrigation sector during my tenure as Deputy Chief Minister," said CM D.K. Shivakumar. CM D.K. Shivakumar made these remarks while inaugurating an event held at the Junior College grounds in Ramanagara, which included the Kannada Rajyotsava celebrations, the unveiling of a statue of Nadaprabhu Kempegowda, and the inauguration of a new City Municipal Council (City Municipal Council) hall.
Keywords
new era, development, Bengaluru South district, CM, D.K. Shivakumar