ಬೆಂಗಳೂರು, ನವೆಂಬರ್,6,2026 (www.justkannada.in): ಹಿರಿಯ ಸಾಹಿತಿಗಳು, ಭಾಷಾಶಾಸ್ತ್ರಜ್ಞ, ವಿಮರ್ಶಕರೂ ಹಾಗೂ ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷ ಕೆ.ವಿ ನಾರಾಯಣ ಅವರ ನಿಧನಕ್ಕೆ ಸಿ.ಎಂ ಡಿ ಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್, ದಶಕಗಳ ಕಾಲ ಕನ್ನಡವನ್ನೇ ಉಸಿರಾಡಿದ ಹಿರಿಯ ಕೆ.ವಿ ನಾರಾಯಣ ಅವರು ಕನ್ನಡ ಭಾಷೆಯ ಉಳಿವಿನ ಬಗ್ಗೆ, ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಬಗ್ಗೆ ಸಾಕಷ್ಟು ಕೆಲಸ ಮಾಡಿದವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಅಕ್ಷರಗಳ ಮೂಲಕ ಕನ್ನಡ ಲೋಕವನ್ನು ಕಟ್ಟಿಕೊಟ್ಟವರು. ಅನೇಕ ಅನುವಾದಗಳ ಮೂಲಕ ಭಾಷೆಯ ಅಳಿವು- ಉಳಿವಿನ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದ್ದರು. ತಮ್ಮ ವಿದ್ವತ್ ಮೂಲಕ ಅಪರೂಪದ ವೈಚಾರಿಕ ಒಳನೋಟವನ್ನು ನೀಡಿದವರು. ಕನ್ನಡ, ಕನ್ನಡಿಗ, ಕರ್ನಾಟಕದ ಏಳಿಗೆಗೆ ಹಲವಾರು ಸಲಹೆ, ಸೂಚನೆಗಳು ಸೇರಿದಂತೆ ತಮ್ಮದೇ ಆದ ಆಲೋಚನಾ ಪರಂಪರೆ ಬೆಳೆಸಿದವರಲ್ಲಿ ಪ್ರಮುಖರು.
ಕರ್ನಾಟಕ ಏಕೀಕರಣವಾದ ನವೆಂಬರ್ ತಿಂಗಳಿನಲ್ಲೇ ಹಿರಿಯ ಸಾಹಿತಿಗಳನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಪಾರ ಶಿಷ್ಯವರ್ಗ, ಸಾಹಿತ್ಯ ಪ್ರೇಮಿಗಳು ಹಾಗೂ ಕುಟುಂಬವರ್ಗಕ್ಕೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.







