ಇಂದು ಸಂಜೆ ಸ್ಪಂದನಾ ಅಂತ್ಯಕ್ರಿಯೆ: ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್.

ಬೆಂಗಳೂರು,ಆಗಸ್ಟ್,9,2023(www.justkannada.in): ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆ ವೇಳೆಗೆ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಸ್ಪಂದನಾ ಅವರ ಅಂತಿಮಯಾತ್ರೆ ನಡೆಯಲಿದ್ದು ಈಡಿಗರ ಸಂಪ್ರದಾಯದ ಪ್ರಕಾರ ಈ ಅಂತ್ಯ ಸಂಸ್ಕಾರ ನೆರವೇರಲಿದೆ. ಸ್ಯಾಂಡಲ್​​ವುಡ್​ನ ಅನೇಕ ಸೆಲೆಬ್ರಿಟಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಇನ್ನು ಹಲವು ಗಣ್ಯಾತೀಗಣ್ಯರು ಆಗಮಿಸಿ ಸ್ಪಂದನಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪುನೀತ್ ರಾಜ್​ಕುಮಾರ್ ಕೂಡ ಹೃದಯಾಘಾತದಿಂದ ಮೃತಪಟ್ಟರು. ಕಣ್ಣೆದುರೇ ಅವರನ್ನು ಅಶ್ವಿನಿ ಕಳೆದುಕೊಂಡರು. ಅಶ್ವಿನಿ ಅವರಿಗೆ ಆ ನೋವು ಇನ್ನೂ ಕಡಿಮೆ ಆಗಿಲ್ಲ. ಸ್ಪಂದನಾ ಸಾವು ಮತ್ತಷ್ಟು ನೋವು ಕೊಟ್ಟಿದೆ. ಈ ಕಾರಣಕ್ಕೆ ಅಶ್ವಿನಿ ಕಣ್ಣೀರು ಹಾಕಿದ್ದಾರೆ.

ಅಶ್ವಿನಿ ಪುನೀತ್ ರಾಜ್​ಕುಮಾರ್ ಮಗಳು ಕೂಡ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಬಂದಿದ್ದು,  ಅವರು ಕೂಡ ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನಕ್ಕೆ ಬಂದ ಅನೇಕರು ವಿಜಯ್ ರಾಘವೇಂದ್ರ ಅವರನ್ನು ಸಮಧಾನ ಮಾಡಿದ್ದಾರೆ.

ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರ ಚಿನ್ನೇ ಗೌಡ ಅವರ ಮಕ್ಕಳು ವಿಜಯ್​ ರಾಘವೇಂದ್ರ ಮತ್ತು ಶ್ರೀಮುರಳಿ. ಹೀಗಾಗಿ ರಾಜ್​ ಕುಟುಂಬದ ಜೊತೆಗೆ ಇವರಿಗೆ ನಂಟಿದೆ. ಸ್ಪಂದನಾ ಕೂಡ ರಾಜ್​ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ, ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್​ ತಂದಿದೆ.

Key words: Spandana -funeral -this evening- Ashwini Puneeth Rajkumar – tears