ರಂಜ-ಸುರಗಿ -9: ದುರಿತ ಕಾಲ…

ಮೈಸೂರು,ಮೇ12,2021(www.justkannada.in):

ದುರಿತ ಕಾಲ…

ಕೋವಿಡ್ ಎಂಬ ವಾಸ್ತವದೊಡನೆ ಬದುಕುವುದು ಅನಿವಾರ್ಯವಾಗಿದೆ. ಸಾವು ಎನ್ನುವುದು ಅಷ್ಟೇ ಕಹಿವಾಸ್ತವ. ನಮ್ಮೆಲ್ಲರ ಬದುಕಿನ ಪಯಣದ ದಾರಿ ತಪ್ಪಿದೆ. ಬಂಧುಗಳು, ಸ್ನೇಹಿತರು, ನೆರೆಹೊರೆಯವರ ಸಾವಿನ ಸುದ್ದಿಯಿಂದ ತತ್ತರಗೊಂಡಿದ್ದೇವೆ. ಒಂದು ಸಾವಿನ ಸುದ್ದಿ ಕೇಳಿ ನಿಟ್ಟುಸಿರು ಬಿಡುತ್ತಿದ್ದಂತೆಯೇ ಅದಕ್ಕೂ ಅವಕಾಶವಿಲ್ಲದಂತೆ ಇನ್ನೊಂದು ಸಾವಿನ ಸುದ್ದಿ ಕೇಳುತ್ತಿದ್ದೇವೆ. ನಮ್ಮನ್ನು ಅಗಲಿದವರಿಗೆ ಅಂತಿಮ ವಿದಾಯ ಹೇಳುವಂತೆಯೂ ಇಲ್ಲ, ಯಾರಿಗೆ ಹೇಳುತ್ತೀರಿ? ಹೇಗೆ ಹೇಳುತ್ತೀರಿ? ಕೇಳಿ ಮರುಗುವುದು, ನಾವು ಇದರಿಂದ ಪಾರಾಗುತ್ತೇವೆಯೇ? ನಮ್ಮ ಒಡಹುಟ್ಟಿದವರು, ಮಕ್ಕಳ ಚಿಂತೆ, ನಾವೆಷ್ಟು ಅದರಿಂದ ಹೊರಬರಲು ಪ್ರಯತ್ನಿಸಿದರೂ ನಮ್ಮನ್ನು ಬಿಡದು. ಎಲ್ಲರೂ ನೆಮ್ಮದಿಯಿಂದ ಇದ್ದರಷ್ಟೇ ನಾವೂ ನೆಮ್ಮದಿಯಿಂದಿರಬಹುದು. ಆದರೆ ಸದ್ಯ ನೆಮ್ಮದಿಯ ಮಾತು ಬಹು ದೂರ.jk

ಹುಟ್ಟು-ಸಾವು, ಹುಟ್ಟಿದ ಮೇಲೆ ಮನುಷ್ಯ ಸಾಯಲೇಬೇಕು. ಹುಟ್ಟಿದ ಮೇಲೆ ಆಸೆ, ವ್ಯಾಮೋಹವೆಲ್ಲಾ ಸಹಜ. ಅದಿಲ್ಲದಿದ್ದರೆ ಬದುಕು ಬರಡು ಎನ್ನಿಸಬಹುದು. ನಮ್ಮ ಬದುಕಿಗೆ ಅರ್ಥವಿದೆಯೇ ಅಥವಾ ಇಲ್ಲವೇ ಅಂತೂ ಬದುಕು ಸಾಗಿಸುತ್ತೇವೆ. ಅರ್ಥ-ಸಾರ್ಥಕತೆ ಎಂಬುದರ ಹುಡುಕಾಟದಲ್ಲಿಯೇ ಬದುಕು ಸವೆಸುತ್ತೇವಏನೋ?  ಯಾರೂ ಶಾಶ್ವತವಾಗಿ ಈ ಬದುಕಿರುವುದಿಲ್ಲ. ಆದರೆ ನಾವು ಚಿರಾಯುಗಳು ಎಂಬಂತೆ ಹಣ ಗಳಿಸುತ್ತೇವೆ, ಆಸ್ತಿ ಮಾಡುತ್ತೇವೆ, ನಮ್ಮ ಆಸೆಗಳಿಗೆ ಕೊನೆಯೆಂಬುದೇ ಇಲ್ಲ. ಬದುಕು ನಶ್ವರ ಎಂಬುದನ್ನು ಮರೆತು ಬದುಕುತ್ತೇವೆ.

ಒಂದು ವರ್ಷಕ್ಕಿಂತ ಮೊದಲು ಜನ ಈ ರೀತಿ ಜನ ಸಾಯುತ್ತಾರೆ ಎಂದು ನಮಗೆ ಅನಿಸಿತ್ತೇ? ವಯೋಸಹಜ ಸಾವು, ಮಾರಣಾಂತಿಕ ಕಾಯಿಲೆಯಿಂದಾದ ಸಾವನ್ನು ನಾವು ನಿರೀಕ್ಷಿಸಿರುತ್ತೇವೆ. ಕಾಯಿಲೆ ಬಿದ್ದು, ನರಳುತ್ತಾ, ಸಾವು ಯಾಕೆ ಬರುವುದಿಲ್ಲ ಎಂದು ಸಾವಿನ ದಾರಿ ನೋಡುತ್ತಿರುವವರ ಸ್ಥಿತಿಯಂತೂ ಅತ್ಯಂತ ದಯನೀಯ. ಅದರೆ ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲ. ಅನಿರೀಕ್ಷಿತ ಸಾವಿನಿಂದ, ಸತ್ತವರಿಗೆ ಬಿಡುಗಡೆ ಸಿಗಬಹುದೇನೋ? ಆದರೆ ಅವರ  ತಂದೆ, ತಾಯಿ, ಮಕ್ಕಳು, ಗಂಡ ಅಥವಾ ಹೆಂಡತಿ ಇವರನ್ನು ದುಃಖದಲ್ಲಿ ಮುಳುಗಿಸಿ ಹೋಗುತ್ತಾರೆ.

ಕೆಲವರು ನಿಗೂಢವಾಗಿ ಸಾಯುತ್ತಾರೆ. ಖ್ಯಾತ ಕತೆಗಾರ, ಕಾದಂಬರಿಕಾರ ಯಶವಂತಚಿತ್ತಾಲರ ‘ಪಯಣ’ ಕಥೆಯಲ್ಲಿ   ಉದ್ಯೋಗದ ಸಲುವಾಗಿ ಹೋಟೆಲ್ಲಿನಲ್ಲಿ ತಂಗಿದ್ದ ಯುವಕನೊಬ್ಬನಿಗೆ  ವ್ಯಕ್ತಿಯೊಬ್ಬ ಬಾಗಿಲು ಬಡಿದು “ ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡಬೇಕು, ಸಿದ್ದನಾಗಿರು.” ಎಂದು ಹೇಳಿ ಹೋಗುತ್ತಾನೆ. ಬೆಳಿಗ್ಗೆ ಬೇಗ ಎಬ್ಬಿಸಲು ರೂಂ ಬಾಯ್ ಗೆ ಹೇಳುತ್ತಾನೆ. ರಾತ್ರಿ ಇದನ್ನೇ ಯೋಚಿಸುತ್ತಾ ಮಲಗಿದ್ದ ಆತನಿಗೆ ನಿದ್ದೆ ಬಾರದೇ ರೂಂ ಬಾಗಿಲು ತೆರೆದಿಟ್ಟೇ ಮಲಗುತ್ತಾನೆ. ಬೆಳಿಗ್ಗೆ, ಆತ ಹೊರಡಲು ತಯಾರಾಗಿರುವ ಸ್ಥಿತಿಯಲ್ಲೇ ಮಲಗಿರುವುದನ್ನು ನೋಡಿದ ರೂಂ ಬಾಯ್ ಕರೆದರೆ ಆತ ಏಳುವುದೇ ಇಲ್ಲ.   ಸತ್ತು ಬಿದ್ದಿರುತ್ತಾನೆ. ಈ ಕತೆಯ ನಿರೂಪಣೆಯಲ್ಲಿ ಸಾವಿನ ನಿಗೂಢತೆಯ ಸೊಗಸಾದ ಚಿತ್ರವಿದೆ. ಸಾವು ಸಹ ಎಷ್ಟು ಆಕರ್ಷಕ! ರಮ್ಯ ಎಂದೆನ್ನಿಸಿತ್ತು, ಹೀಗನ್ನಿಸುವುದು  ಹೃದಯಹೀನತೆಯಂತೂ ಇಲ್ಲ.

ಸಾವು ಅನಿವಾರ್ಯ ಎಂಬುದನ್ನು ಬುದ್ಧ ಕಿಸಾಗೌತಮಿಗೆ ‘ಸಾವಿಲ್ಲದ ಮನೆಯ ಸಾಸಿವೆಕಾಳು’ ತರಲು ಹೇಳಿ ಮನವರಿಕೆ ಮಾಡಿರುವ ಕತೆ ನಮಗೆಲ್ಲಾ ಗೊತ್ತಿದೆ. ಆದರೆ ಕೋವಿಡ್ ಕಾಯಿಲೆಯಿಂದ ಜನ ಹೀಗೆ ಸಾಯುತ್ತಿರುವಾಗ ಇದೆಲ್ಲಾ ಕೇಳಿ ಸಾಂತ್ವನ ಪಡೆಯಲು ಸಾಧ್ಯವೇ? ಈ ಸಾವು ನ್ಯಾಯವೇ….ಎಂಬ ಪ್ರಶ್ನೆ ನಮ್ಮ ಮುಂದೆ ಮತ್ತೆ ಮತ್ತೆ ಬರುತ್ತದೆ.

ಕಾಡಿನಲ್ಲಿ ಸೌದೆ ತರಲು ಹೋದ ಪತಿ ಸತ್ಯವಾನ ಹಾವು ಕಡಿದು ಮರಣ ಹೊಂದಿದಾಗ ಪತ್ನಿ ಸಾವಿತ್ರಿ ಯಮನೊಂದಿಗೆ ಸಂವಾದ ಮಾಡಿ ಅವನ ಮೆಚ್ಚುಗೆಗೆ ಪಾತ್ರಳಾಗಿ ಪತಿಯನ್ನು ಬದುಕಿಸಿಕೊಂಡ ಪುರಾಣದ ಕತೆಯನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ರುರು ಎಂಬ ಋಷಿಪುತ್ರ  ಪ್ರಮದ್ವರೆಯನ್ನು ತನ್ನ ಆಯುಷ್ಯದಲ್ಲಿ ಅರ್ಧಭಾಗ ಕೊಟ್ಟು ಬದುಕಿಸಿಕೊಂಡ ಕತೆ ಅಷ್ಟೊಂದು ಪ್ರಚಲಿತವಾಗಿಲ್ಲ.  ಸಾವನ್ನು ಗೆದ್ದಿರುವ ಸ್ವಾರಸ್ಯಕರವಾದ ಈ ಕತೆಗಳು  ಏನನ್ನು ಹೇಳುತ್ತವೆ? ಇವು ಜೀವನಪ್ರೀತಿಯ ಕತೆಗಳು.

ಸಾವಿನ ನೋವು ನಮಗೆ ಅರಿವಾಗುವುದು ನಮ್ಮ ಅತ್ಯಂತ ಹತ್ತಿರದವರು ನಮ್ಮನ್ನು ಅಗಲಿದಾಗಲೇ. ನಮ್ಮ ತಾಯಿಯನ್ನು ಬಹಳ ಹಿಂದೆಯೇ ಕಳೆದುಕೊಂಡಿದ್ದೇನೆ. ಸಾಯುವ ವಯಸ್ಸಲ್ಲದಿದ್ದರೂ ನಾಲ್ಕು ದಿನ ಕಾಯಿಲೆ ಬಿದ್ದು ಇದ್ದಕ್ಕಿಂದ್ದಂತೆ ಹೋದಾಗ ನಮಗೆ- ಮಕ್ಕಳಿಗೆ ದೊಡ್ಡ ಆಘಾತವಾಯಿತು. ಇದಕ್ಕಿಂತ ದೊಡ್ಡ ವಿಪತ್ತು ನನ್ನ ಜೀವನದಲ್ಲಿ ಮುಂದೆ ಬರಲಾರದೆಂದು  ಅನಿಸಿತ್ತು. ಆದರೆ ನಮ್ಮ  ‘ಅಮ್ಮ’ ನಮ್ಮೊಂದಿಗೆ ಭೌತಿಕ ಶರೀರದೊಂದಿಗೆ ಇಲ್ಲದಿರಬಹುದು. ಅವರು ನಮ್ಮೊಂದಿಗೆ ಇದ್ದೇ ಇದ್ದಾರೆ. ನಮ್ಮ ನೆನಪಿನಲ್ಲಿ ಅವರು ಶಾಶ್ವತವಾಗಿ ಇರುತ್ತಾರೆ. ನೆನಪಿಗೆ –ಅವರ ಆತ್ಮಕ್ಕೆ ಸಾವಿಲ್ಲ. ಸಾವಿನ ದುಃಖ ನೀಗಿಕೊಳ್ಳಲು ಭಗವದ್ಗೀತೆಯ ಅಧ್ಯಾಯ 2 ರ 23 ನೆಯ ಈ ಶ್ಲೋಕವನ್ನು ಅಥವಾ ಅದೇ ಅರ್ಥ ಬರುವಂತಹ ತತ್ವಗಳನ್ನು ಸಾಮಾನ್ಯವಾಗಿ ಹೆಚ್ಚಿನವರು ಉಲ್ಲೇಖಿಸಿ ಸಮಾಧಾನ ಪಟ್ಟುಕೊಳ್ಳುವುದನ್ನು ನೋಡುತ್ತಲೇ ಬಂದಿದ್ದೇವೆ.

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |

ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ  ಮಾರುತಃ ||

ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು. ಆತ್ಮಕ್ಕೆ ಸಾವಿಲ್ಲ. ಈ ಭೌತಿಕವಾದ ದೇಹ ಪಂಚಭೂತಗಳಲ್ಲಿ ಲೀನವಾಯಿತು ಎನ್ನುತ್ತೇವೆ. ಅಸ್ತಿತ್ವದಲ್ಲಿರುವ ಮನುಷ್ಯ, ಯಾವುದೇ ಜೀವಿ ಅಥವಾ ನಿರ್ಜೀವ ವಸ್ತು  ಭೌತಿಕವಾಗಿ ಇಲ್ಲವಾದರೂ ಅದರ ‘ಇರವು’ ಮಾತ್ರ ಶಾಶ್ವತ. ಸಾವಿನ ನಂತರದ  ಅಸ್ತಿತ್ವ ನಮ್ಮ ನೆನಪುಗಳ ರೂಪದಲ್ಲಿರುತ್ತದೆ.

ಪ್ರಸ್ತುತ, ನಾವು ಎಂದೂ ಕಂಡಿರದ ಸಾವಿನ ದೃಶ್ಯಗಳನ್ನು ನೋಡುತ್ತಿದ್ದೇವೆ. ಈ ಜಾಗತಿಕ ಪಿಡುಗು ಯಾರನ್ನು ಉಳಿಸುತ್ತದೋ ಯಾರನ್ನು ಕರೆದೊಯ್ಯುತ್ತದೆಯೋ ನಮಗೆ ತಿಳಿಯದು. ಇದಕ್ಕೆ ಸಾಕ್ಷಿಯಾಗಿರುವ ನಾವು ಏನು ಹೇಳಿದರೂ ಈ ಸಮಯದಲ್ಲಿ ಅದು ವ್ಯರ್ಥಾಲಾಪವಾಗದೇ? ಆದರೆ ಈ ಸಾವಿನ ಭಾರವನ್ನು ತಡೆಯಲಾಗದ ಮನಸ್ಸು ಹೀಗೇನೋ ಮಾತನಾಡಿ ಬದುಕಿರುವುದಕ್ಕೆ ಸಮಾಧಾನ ಕಂಡುಕೊಳ್ಳುತ್ತದಷ್ಟೇ…….

ಕೆ.ಪದ್ಮಾಕ್ಷಿ