ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕು- ಸುಪ್ರೀಂ ಕೋರ್ಟ್

ನವದೆಹಲಿ,ಜೂನ್,20,2026 (www.justkannada.in): ಸಾರ್ವಜನಿಕ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳಲ್ಲಿ (ಫುಟ್‌ಪಾತ್‌) ಸುರಕ್ಷಿತವಾಗಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂವಿಧಾನದ 21ನೇ ವಿಧಿಯಡಿ (ಜೀವಿಸುವ ಹಕ್ಕು) ಪಾದಚಾರಿಗಳಿಗೆ ಸುರಕ್ಷಿತ, ಅಡೆತಡೆ ರಹಿತ ಹಾಗೂ ಅಂಗವಿಕಲ ಸ್ನೇಹಿ ಪಾದಚಾರಿ ಮಾರ್ಗಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ದೇಶಾದ್ಯಂತ ಪಾದಚಾರಿಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸಮಗ್ರ ಮಾರ್ಗಸೂಚಿ ಹಾಗೂ ಕಾನೂನು ಚೌಕಟ್ಟನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅತಿಕ್ರಮಣ ರಹಿತ, ಎಲ್ಲರಿಗೂ ಸುಲಭವಾಗಿ ಬಳಸಬಹುದಾದ ಪಾದಚಾರಿ ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆಗೆ ನೀತಿಗಳನ್ನು ರೂಪಿಸಬೇಕು ಎಂದು ಆದೇಶಿಸಿದೆ.

“ಸರಿಯಾದ ಪಾದಚಾರಿ ಮಾರ್ಗಗಳಿಲ್ಲದಿದ್ದರೆ ಜನರು ರಸ್ತೆಯಲ್ಲೇ ನಡೆಯಬೇಕಾಗುತ್ತದೆ. ಇದರಿಂದ ಅಪಘಾತಗಳ ಅಪಾಯ ಹೆಚ್ಚುತ್ತದೆ. ಪಾದಚಾರಿಗಳ ಸುರಕ್ಷತೆ ಐಷಾರಾಮಿ ಸೌಲಭ್ಯವಲ್ಲ, ಅದು ಸಂವಿಧಾನಾತ್ಮಕ ಹಕ್ಕು” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವುಗೊಳಿಸುವುದು ಕಡ್ಡಾಯವಾಗಿದ್ದು, ಅಂಗವಿಕಲರು ಸೇರಿದಂತೆ ಎಲ್ಲ ನಾಗರಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಈ ತೀರ್ಪು ದೇಶದ ನಗರ ಯೋಜನೆ, ರಸ್ತೆ ಸುರಕ್ಷತೆ ಹಾಗೂ ಪಾದಚಾರಿಗಳ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

Key words: Walking, footpath, fundamental right,  Supreme Court