JSS LAW COLLEGE :  ಪ್ರಥಮ ರ್ಯಾಂಕ್ ಪಡೆದ ವಿಧುಲಾ ದೇಶಕ್.

ಮೈಸೂರು,ಸೆಪ್ಟಂಬರ್,30,2022(www.justkannada.in): ಮನೆಯೇ ಮೊದಲ ಪಾಠಶಾಲೆ ತಾಯಿ ತಂದೆ ಮೊದಲ ಗುರು ಅನ್ನೋ ಮಾತು ಅಕ್ಷರಶಃ ಸತ್ಯ. ಇದಕ್ಕೆ ಸಾಕ್ಷಿ ಮೈಸೂರಿನ ಯುವ ಪ್ರತಿಭಾನ್ವಿತ ವಕೀಲೆ ವಿಧುಲಾ ದೇಶಕ್ ಉತ್ತಮ ಉದಾಹರಣೆ. ಮೈಸೂರಿನ ಖ್ಯಾತ ವಕೀಲರಾದ ಮಹದೇವ ಹಾಗೂ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಅನುರಾಧ ಅವರ ಮಗಳು. ಇನ್ನು ಹೆಣ್ಣು ಮಕ್ಕಳಿಗೆ ತನ್ನ ತಂದೆಯೇ ರೋಲ್ ಮಾಡೆಲ್. ಅದರಂತೆ ವಿಧುಲಾ ಅವರಿಗೂ ತಮ್ಮ ತಂದೆಯವರೇ ಹೀರೋ. ತಂದೆ ಅಂದರೆ ಎಲ್ಲಿಲ್ಲದ ಪ್ರೀತಿ. ಬಾಲ್ಯದಿಂದಲೂ ತಂದೆಯ ಮಗಳಾಗಿ ಬೆಳೆದವರು ವಿಧುಲಾ. ಚಿಕ್ಕಂದಿನಿಂದಲೂ ಅಪ್ಪನ ಕರಿ ಕೋಟಿನ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಆಕೆ, ತನಗೆ ಬುದ್ದಿ ಬಂದ ದಿನದಿಂದಲೂ ತಾನು ತಂದೆಯಂತೆ ಉತ್ತಮ ವಕೀಲೆಯಾಗಬೇಕೆಂದು ಕನಸು ಕಟ್ಟಿಕೊಂಡವಳು. ಕನಸು ಕಟ್ಟಿಕೊಂಡಿದ್ದು ಮಾತ್ರವಲ್ಲ ಅದನ್ನು ನನಸು ಮಾಡಿಕೊಂಡು ಇದೀಗ ವಕೀಲೆಯಾಗಿದ್ದಾರೆ.

ವಿಧುಲಾ ತಮ್ಮ ಆರಂಭಿಕ ಶಿಕ್ಷಣವನ್ನು ಸೇಂಟ್ ಜೋಸೆಫ್ ಸ್ಟೇಟ್ ಸ್ಕೂಲ್‌, ಡಿ ಪಾಲ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್, ಐಡಿಯಲ್‌ ಜಾವ ರೋಟರಿ ಶಾಲೆ ಮತ್ತು ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಮಾಡಿದರು. ನಂತರ  ಸದ್ವಿದ್ಯಾ ಸೆಮಿ ರೆಸಿಡೆನ್ಶಿಯಲ್ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಮುಗಿಸಿ ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್‌ ಗೆ ಸೇರಿದರು.  ಅಲ್ಲಿ ಎರಡು ವರ್ಷಗಳು ಪೂರ್ಣಗೊಂಡ ನಂತರ ಮೈಸೂರಿನ ಜೆಎಸ್‌ ಎಸ್ ಕಾನೂನು ಕಾಲೇಜಿನಲ್ಲಿ ಸೇರಿಕೊಂಡರು ಮತ್ತು 10 ಸೆಮಿಸ್ಟರ್‌ಗಳ ಕೋರ್ಸ್ ಅನ್ನು ಯಶಸ್ವಿಯಾಗಿ ಮುಗಿಸಿದರು. ನಂತರ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿಯೇ ಬಿಎ ಎಲ್ ಎಲ್ ಬಿ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ತಮ್ನ ಕನಸನ್ನು ನನಸಾಗಿಸಿಕೊಂಡರು.

ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು  ವಕೀಲರಾಗಿ ವೃತ್ತಿ ಜೀವನ ಆರಂಭಿಸಲು ಹೊರಟಿರುವ ವಿಧುಲಾ ದೇಶಕ್ ಅವರ ಕನಸು ನನಸಾಗಲಿ.‌

 ನಾಳೆ ಪ್ರಶಸ್ತಿ ಪ್ರದಾನ.

ಬಿಎ ಎಲ್ ಎಲ್ ಬಿ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ವಿಧುಲಾ ಅವರಿಗೆ ನಾಳೆ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್ ನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ,  ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಎ.ಎಸ್ ಬೋಪಣ್ಣ, ಹೈಕೋರ್ಟ್ ನ್ಯಾಯಾಧೀಶರಾದ ಪಿ.ಎಸ್ ದಿನೇಶ್ ಕುಮಾರ್  ಭಾಗವಹಿಸಲಿದ್ದಾರೆ.

Key words: JSS- LAW -COLLEGE –mysore- Vidhula – first rank.