ಅನಧಿಕೃತ ಬ್ಯಾನರ್, ಫ್ಲೆಕ್ಸ್ ತಡೆಗೆ ವಿಫಲ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ತರಾಟೆ.

ಬೆಂಗಳೂರು,ಆಗಸ್ಟ್,2,2023(www.justkannada.in): ಅನಧಿಕೃತ ಬ್ಯಾನರ್, ಫ್ಲೆಕ್ಸ್ ತಡೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ  ಸರ್ಕಾರ ಮತ್ತು  ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿದ ಸಿಜೆ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಎಂ.ಜಿ.ಎಸ್. ಕಮಲ್​ ಅವರ ಪೀಠ, ಜಾಹಿರಾತು ಹಾವಳಿ ತಡೆಗೆ ಎಷ್ಟು ವರ್ಷ ಬೇಕು. ಶುಭ ಮುಹೂರ್ತ ಬೇಕಾ..? ಎಂದು ಕ್ಲಾಸ್ ತೆಗೆದುಕೊಂಡಿದೆ.

ಅನಧಿಕೃತ ಜಾಹಿರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೆ? ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? ಚುನಾವಣೆ ವೇಳೆ 60 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ ಕೇವಲ 134 ದೂರು ಪರಿಗಣಿಸಿ 40 ಎಫ್‌ ಐಆರ್ ದಾಖಲಿಸಲಾಗಿದೆ. ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಕ್ರಮವೇಕಿಲ್ಲ ಎಂದು ಹೈಕೋರ್ಟ್ ಪೀಠ ಪ್ರಶ್ನಿಸಿದೆ.

ಇನ್ಮುಂದೆ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ದಂಡ ವಿಧಿಸಿ. ಬಿಬಿಎಂಪಿ, ರಾಜ್ಯ ಸರ್ಕಾರ ತಲಾ 50 ಸಾವಿರ ಠೇವಣಿ ಇಡಬೇಕು. ಅನಧಿಕೃತ ಜಾಹಿರಾತು ಫಲಕ ಅಳವಡಿಸಲು ಅವಕಾಶ ನೀಡುವ ಕಟ್ಟಡಗಳ ಮಾಲೀಕರಿಗೂ ನೋಟಿಸ್ ನೀಡಬೇಕು. ಫ್ಲೆಕ್ಸ್ ಮೂಲಕ ಶುಭಾಶಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಈ ಕುರಿತು ಮೂರು ವಾರಗಳಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್​ ತಾಕೀತು ಮಾಡಿದೆ.

Key words: Unauthorized-banner- failure – stop- high court- Govt- BBMP