ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಗ್ರಹವಾಗುವ ಶುಲ್ಕವೆಲ್ಲ ಆಯಾ ಸಂಸ್ಥೆಗಳಿಗೆ ವರ್ಗಾವಣೆ- ಸಚಿವ ಅಶ್ವತ್ ನಾರಾಯಣ್

ಗೌರೀಬಿದನೂರು,ಫೆಬ್ರವರಿ,28,2022(www.justkannada.in):  ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಶುಲ್ಕವನ್ನು ಆಯಾಯ ಕಾಲೇಜು ಅಭಿವೃದ್ಧಿ ಸಮಿತಿಗಳಿಗೇ ನೀಡಲಾಗುವುದು. ಹೀಗೆ ಸಂಗ್ರಹವಾಗುವ ಹಣವನ್ನು ಆಯಾ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಸೋಮವಾರ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ, ಸರಕಾರಿ ಪಾಲಿಟೆಕ್ನಿಕ್ ಮತ್ತು ಜಿಟಿಟಿಸಿ ಆವರಣದಲ್ಲಿ ನಿರ್ಮಿಸಿರುವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸಿ, ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ರಾಜ್ಯದ ಸರಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ 7 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಂದ ಸಂಗ್ರಹವಾಗುವ ಶುಲ್ಕವನ್ನು ಸರಕಾರ ಇನ್ನು ಮುಂದೆ ಮುಟ್ಟುವುದಿಲ್ಲ. ಬದಲಿಗೆ, ಆಯಾಯ ಕಾಲೇಜು ಅಭಿವೃದ್ಧಿ ಸಮಿತಿಗಳ ಖಾತೆಗಳಿಗೇ ನೇರವಾಗಿ ಹೋಗುವಂತೆ ಮಾಡಲಿದ್ದು, ಮೂಲಸೌಕರ್ಯ ಮತ್ತು ಬೋಧನೆಯ ಗುಣಮಟ್ಟ ಸುಧಾರಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಲಾಗುವುದು’ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇಡೀ ಶೈಕ್ಷಣಿಕ ವಲಯವು ಡೀಪ್ ಲರ್ನಿಂಗ್ ಕ್ರಮದತ್ತ ಹೊರಳಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೂಡ ಆಧುನಿಕ ತಂತ್ರಜ್ಞಾನ ಕೋರ್ಸುಗಳನ್ನು ಪಠ್ಯದಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಕೌಶಲ್ಯ ಕಲಿಕೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗದ ಖಾತ್ರಿ ದೊರೆಯಲಿದೆ ಎಂದು ಅವರು ಹೇಳಿದರು.

21ನೇ ಶತಮಾನದಲ್ಲಿ ಡಿಜಿಟಲ್ ಕೌಶಲ್ಯಗಳು ಅನಿವಾರ್ಯವಾಗಿವೆ. ಹೀಗಾಗಿಯೇ ಸರಕಾರಿ ಕಾಲೇಜುಗಳಲ್ಲಿ ಐಒಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್ ಮುಂತಾದವುಗಳನ್ನು ಅಳವಡಿಸಲಾಗಿದೆ. ಪಾಲಿಟೆಕ್ನಕ್ ಕಾಲೇಜಿನಲ್ಲೂ ವಿದ್ಯುಚ್ಚಾಲಿತ ವಾಹನಗಳ ಕೌಶಲ್ಯ ಮತ್ತು ನವೀಕರಿಸಬಹುದಾದ ಇಂಧನಮೂಲಗಳ ಕಲಿಕೆಯಂತಹ ಸಮಕಾಲೀನ ಬೇಡಿಕೆಯ ಕೋರ್ಸುಗಳನ್ನು ಸೇರಿಸಲಾಗಿದೆ. ಇಲ್ಲಿನ ಜಿಟಿಟಿಸಿ ಸಂಸ್ಥೆಯಿಂದ ವರ್ಷಕ್ಕೆ 1,000 ವಿದ್ಯಾರ್ಥಿಗಳು ಕೌಶಲ್ಯಸಹಿತರಾಗಿ ಹೊರಹೊಮ್ಮಲಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ವಿವರಿಸಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಬಲ ಇಚ್ಛಾಶಕ್ತಿಯೊಂದಿಗೆ ಸರಕಾರಿ ಕಾಲೇಜುಗಳನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸಲಾಗಿದೆ. ಇವತ್ತು ಖಾಸಗಿ ವಿ.ವಿ.ಗಳು ಕೂಡ ಈ ಮಟ್ಟಕ್ಕಿಲ್ಲ ಎಂದು ಅವರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ  ಸಚಿವ ಎಂ.ಟಿ.ಬಿ.ನಾಗರಾಜ್, ಶಾಸಕ ಶಿವಶಂಕರ ರೆಡ್ಡಿ ಮಾತನಾಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ ಸೇರಿದಂತೆ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Transfer-fees – government-minister -Ashwath Narayan