ಸೊರಗುತ್ತಿದೆ ಸುವರ್ಣ ವಿಧಾನ ಸೌಧ, ಇಲಾಖೆಗಳನ್ನು ಸ್ಥಳಾಂತರಿಸುವಲ್ಲಿ ಸರ್ಕಾರ ವಿಫಲ.

ಬೆಳಗಾವಿ, ನವೆಂಬರ್ 18, 2022 (www.justkannada.in): ಸುಮಾರು ಒಂದು ದಶಕದ ಹಿಂದೆ ಬರೋಬ್ಬರಿ ಅಂದಾಜು ರೂ.೪೫೦ ಕೋಟಿ ವೆಚ್ಚದಲ್ಲಿ ಅಂದಿನ ಸರ್ಕಾರದ ವತಿಯಿಂದ ನಿರ್ಮಾಣ ಮಾಡಿದಂತಹ ಬೆಳಗಾವಿಯ ಸುವರ್ಣ ವಿಧಾನ ಸೌಧ ಸರ್ಕಾರದ ಬೊಕ್ಕಸದ ಪಾಲಿಗೆ ಒಂದು ಬಿಳಿ ಆನೆ ಆದಂತಾಗಿದೆ. ಏಕೆಂದರೆ ಅಂದಿನಿಂದ ಈವರೆಗೆ ಬಂದು ಹೋಗಿರುವಂತಹ ವಿವಿಧ ಸರ್ಕಾರಗಳು ಸಚಿವಾಲಯ ಮಟ್ಟದ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸುವಲ್ಲಿ ವಿಫಲವಾಗಿವೆ.

ರಾಜಕಾರಣಿಗಳ ಆರೋಪವೇನೆಂದರೆ ಇದೊಂದು ಕೇವಲ ಗೋಡೌನ್ ರೀತಿಯಿರುವ ಕಟ್ಟವಾಗಿದ್ದು, ಸಚಿವಾಲಯ ಮಟ್ಟದ ಕಚೇರಿಗಳನ್ನು ಸ್ಥಾಪಿಸುವ ಯಾವುದೇ ಸೂಕ್ತ ಸೌಲಭ್ಯಗಳಿಲ್ಲವಂತೆ. ಜೊತೆಗೆ, ಹಿರಿಯ ಅಧಿಕಾರಿಗಳು ಬೆಳಗಾವಿಗೆ ಸ್ಥಳಂತಾರವಾಗಲು ನಿರಾಕರಿಸುತ್ತಿರುವರಂತೆ. ಅದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಅಧಿಕಾರಿಗಳ ಆರೋಪವೇನೆಂದರೆ, ರಾಜಕಾರಣಿಗಳಿಗೆ ಅಧಿಕಾರಿಗಳು ಬೆಂಗಳೂರಿನಲ್ಲೇ ಇರಬೇಕು ಎನ್ನುವುದು ಮತ್ತು ವಿವಿಧ ಸಚಿವಾಲಯಗಳ ಮಟ್ಟದ ಕಚೇರಿಗಳನ್ನು ಅಲ್ಲಿಗೆ ಸ್ಥಳಂತಾರಿಸುವಲ್ಲಿ ಇರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಗಳೇ ಸುವರ್ಣ ವಿಧಾನ ಸೌಧದ ಸಂಪೂರ್ಣ ಬಳಕೆಗೆ ಎದುರಾಗಿರುವ ಮುಖ್ಯ ಕಾರಣಗಳಂತೆ.

ರಾಜ್ಯ ಸರ್ಕಾರ ಸುವರ್ಣ ವಿಧಾನ ಸೌಧದ ನಿರ್ವಹಣೆಗಾಗಿಯೇ ವಾರ್ಷಿಕ ಬರೋಬ್ಬರಿ ರೂ.೫ ಕೋಟಿ ವೆಚ್ಚ ಮಾಡುತ್ತಿದೆ. ಈ ನಾಲ್ಕು ಅಂತಸ್ತುಗಳ ಕಟ್ಟಡವನ್ನು ೬೦,೩೯೮ ಚದರ ಮಿ.ಗಳ ಪ್ರದೇಶ ವ್ಯಾಪ್ತಿಯಲ್ಲಿ (ಅಂದಾಜು ೧೫,೦೦೦ ಚದರ ಮೀಟರ್, ಅಮದರೆ ವಿಧಾನ ಸೌಧಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ) ನಿರ್ಮಾಣ ಮಾಡಲಾಗಿದೆ. ಆದರೆ ಕೇವಲ ಚಳಿಗಾಲದ ಅಧಿವೇಶನವನ್ನು ಮಾತ್ರ ನಡೆಸಲು ಮೀಸಲಾಗಿಸಲಾಗಿದೆ. ಈ ಸುವರ್ಣ ವಿಧಾನ ಸೌಧದಲ್ಲಿ ಅಸೆಂಬ್ಲಿ ಹಾಗೂ ಪರಿಷತ್ ಹಾಲ್‌ ಗಳ ಜೊತೆಗೆ, ೩೮ ಸಚಿವಾಲಯ ಚೇಂಬರ್‌ ಗಳು ಹಾಗೂ ೧೪ ಸಮಾವೇಶ ಕೊಠಡಿಗಳಿವೆ.

ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರ ಪ್ರಕಾರ, ಈ ಸುವರ್ಣ ವಿಧಾನ ಸೌಧವನ್ನು ಥೇಟ್ ವಿಧಾನ ಸೌಧದ ರೀತಿಯಲ್ಲೇ ಅಂದರೆ ಅಲ್ಲಿರುವಂತಹ ಸೌಲಭ್ಯಗಳ ಪ್ರಕಾರವೇ ನಿರ್ಮಾಣ ಮಾಡಬೇಕಿತ್ತು. “ಆದರೆ ಈ ಸುವರ್ಣ ವಿಧಾನ ಸೌಧ ಕೇವಲ ಒಂದು ಗೋಡೌನ್ ರೀತಿ ಕಾಣುತ್ತದೆ. ಇಲ್ಲಿ ಸಚಿವಾಲಯ ಹಾಗೂ ಅಧಿಕಾರಿಗಳಿಗೆ ಅನುಕೂಲವಾಗುವಂತ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲ. ಮೂಲಭೂತಸೌಕರ್ಯಗಳೇ ಇಲ್ಲ,” ಎಂದರು. ಜೊತೆಗೆ, ಮೂಲಸೌಕರ್ಯಗಳ ಕೊರತೆ ಇದೆ ಎನ್ನುವುದು ಹಾಗೂ ಇಲಾಖೆಗಳನ್ನು ಇಲ್ಲಿಗೆ ಸ್ಥಳಾಂತರಿಸುವಲ್ಲಿ ವಿಳಂಬ ನೀತಿಯೇ ಕಾರಣ ಎಂದು ಹಿರಿಯ ಅಧಿಕಾರಿಗಳು ಆರೋಪಿಸುತ್ತಾರೆ.

ತಮ್ಮ ಗುರುತನ್ನು ಬಹಿರಂಗಗೊಳಿಸಲು ಬಯಸದೇ ಇರುವಂತಹ ಆಡಳಿತ ಪಕ್ಷದ ಕನಿಷ್ಠ ಎರಡು ಎಂಎಲ್‌ ಎಗಳು ಈ ಕಟ್ಟಡ ಬಹಳ ಇಕ್ಕಟ್ಟಾಗಿದ್ದು, ಎಲ್ಲಾ ಇಲಾಖೆಗಳನ್ನೂ ಒಳಗೊಳ್ಳುವಷ್ಟು ಸಾಮರ್ಥ್ಯ ಹೊಂದಿಲ್ಲ ಎಂದರು. ಜೊತೆಗೆ, ಅಧಿವೇಶನಗಳು ನಡೆಯುವಾಗಲೂ ಸಹ ಇಲ್ಲಿ ಸ್ಥಳಾವಕಾಶದ ಕೊರತೆ ಎದುರಾಗುತ್ತದೆ ಎಂದರು.

“ಇಲ್ಲಿರುವ ಕೊಠಡಿಗಳನ್ನು ಸಚಿವರು ಹಾಗೂ ಅಧಿಕಾರಿಗಳ ಕ್ಯಾಬಿನ್‌ ಗಳಾಗಿ ವಿಭಜಿಸಲು ಆಗುವುದಿಲ್ಲ. ಮೇಲಾಗಿ, ಬೆಂಗಳೂರಿನಲ್ಲಿರುವ ರಾಜ್ಯ ಆಡಳಿತ ಮೂರು ಕಟ್ಟಡಗಳಲ್ಲಿವೆ; ಆದರೆ ಇಲ್ಲಿ ಎಲ್ಲವನ್ನೂ ಕೇವಲ ಒಂದೇ ಕಟ್ಟಡದಲ್ಲಿ ಸೇರಿಸಲಾಗಿದೆ,” ಎನ್ನುವುದು ಎಂಎಲ್‌ ಎಗಳ ಅಭಿಪ್ರಾಯವಾಗಿದೆ.

೨೦೨೦ರಲ್ಲಿ ಯಡಿಯೂರಪ್ಪ ಮುಂದಾಳತ್ವದ ಸರ್ಕಾರ ಒಂಬತ್ತು ಸಚಿವಾಲಯ ಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಲು ಆದೇಶಿಸಿತು. ಆದರೆ ಎರಡು ವರ್ಷಗಳಾದರೂ ಸಹ ಅದು ಇನ್ನೂ ಕಾರ್ಯಗತವಾಗಿಲ್ಲ. ಕೇವಲ ರಾಜ್ಯ ಮಾಹಿತಿ ಆಯೋಗ ಹೊರತುಪಡಿಸಿದರೆ, ಮತ್ಯಾವುದೇ ಇಲಾಖೆ ಬೆಳಗಾವಿಗೆ ಸ್ಥಳಾಂತರಗೊಂಡಿಲ್ಲ.

ಸುವರ್ಣ ವಿಧಾನ ಸೌಧದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭೀಮಾ ನಾಯಕ್ ಅವರು ತಿಳಿಸಿದಂತೆ ಪ್ರಸ್ತುತ ಅಲ್ಲಿ ಕೇವಲ ಒಂದೇ ಒಂದು ಸಚಿವಾಲಯ ಮಟ್ಟದ ಕಚೇರಿ ಕಾರ್ಯನಿರ್ವಹಿಸುತ್ತಿದೆ. “ಕಳೆದ ವರ್ಷ ಸರ್ಕಾರ, ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ೨೬ ಸರ್ಕಾರಿ ಕಚೇರಿಗಳನ್ನು  ಸ್ಥಳಾಂತರಿಸಿತು. ಆ ಪೈಕಿ ೨೩ ತಾಲ್ಲೂಕು-ಮಟ್ಟದ ಕಚೇರಿಗಳು,” ಎಂದರು.

ಸರ್ಕಾರದ ಈ ನಿಲುವು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. ಏಕೆಂದರೆ, ಅವರು ಒಂದು ಸಣ್ಣ ಕೆಲಸಕ್ಕೂ ಸಹ ೧೪ ಕಿ.ಮೀ.ಗಳಷ್ಟು ದೂರ ಕ್ರಮಿಸಬೇಕಾಗಿದೆ.

ವಿಜಯಪುರ ಮೂಲದ ರೈತ ನಾಯಕರಾದ ಜಿ.ಸಿ. ಮುಟ್ಟಲದಿನ್ನಿ ಅವರು ಕೆಬಿಜೆಎನ್‌ ಎಲ್‌ ನ ಸಚಿವಾಲಯ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಬೇಕೆಂದು ಹೋರಾಟ ನಡೆಸುತ್ತಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೆಂಗಳೂರಿನಲ್ಲಿ ಏಕಿರಬೇಕು ಎಂದು ಪ್ರಶ್ನಿಸುತ್ತಾರೆ. “ರೈತರು ಹಾಗೂ ಸ್ಥಳೀಯರು ಆಲಮಟ್ಟಿ ಯೋಜನೆಗೆ ಸಂಬಂಧಪಟ್ಟಂತಹ ವಿವಿಧ ಕ್ಲೇಮುಗಳ ಇತ್ಯರ್ಥಕ್ಕೆ ಬೆಂಗಳೂರಿಗೆ ಹೋಗಬೇಕಾಗಿದೆ,” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ರಾಯಭಾಗದ ಓರ್ವ ಕಬ್ಬು ಬೆಳೆಗಾರರಾದ ಸ್ಥಿತಲನಾಥ ಕಂಗಲಗೌಡ ಅವರು ತಿಳಿಸುವಂತೆ ಬಹುಪಾಲು ಸಕ್ಕರೆ ಕಾರ್ಖಾನೆಗಳು ಉತ್ತರ ಕರ್ನಾಟಕದಲ್ಲಿವೆ. “ಸರ್ಕಾರದ ಹಾಲಿ ಸಕ್ಕರೆ ಸಚಿವರೂ ಸಹ ಇಲ್ಲಿಯವರೇ ಆಗಿದ್ದಾರೆ. ಆದರೆ, ಈ ಇಲಾಖೆಯನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸುವಂತೆ ಆದೇಶ ನೀಡಿದ್ದರೂ ಸಹ ಸಚಿವಾಲಯದ ಕಚೇರಿ (ಕಾರ್ಯದರ್ಶಿಗಳು) ಬೆಂಗಳೂರಿನಿಂದ ಏಕೆ ಕಾರ್ಯನಿರ್ವಹಿಸಬೇಕು?” ಎಂದು ಪ್ರಶ್ನಿಸಿದರು.

ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ. ಹೇಮಲತಾ ಅವರು ಈ ಸಂಬಂಧ ಮಾತನಾಡಿ ಸುವರ್ಣ ವಿಧಾನ ಸೌಧದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟಂತಹ ಎಲ್ಲಾ ಇಲಾಖೆಗಳ ಕಚೇರಿಗಳಿಗೂ ಸಾಕಾಗುವಷ್ಟು ಸ್ಥಳಾವಕಾಶವಿದೆ. “ಸುವರ್ಣ ವಿಧಾನ ಸೌಧದಿಂದ ಕಾರ್ಯನಿರ್ವಹಿಸಲು ಅಗತ್ಯವಿರುವ ನೆಟ್‌ ವರ್ಕ್ ಸಂಪರ್ಕವನ್ನು ಪಡೆದು, ಚೇಂಬರ್‌ ಗಳನ್ನು ಸೃಷ್ಟಿಸಿ ಅಲ್ಲಿಂದಲೇ ಕೆಲಸ ಮಾಡಬಹುದು,” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಪ್ರಸ್ತುತ, ಕೇವಲ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರವೇ ಇಲ್ಲಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಒಪ್ಪಿಕೊಂಡರು.

ಈ ಸಂಬಂಧ ಮಾತನಾಡಿದ ಹಿರಿಯ ಐ.ಎ.ಎಸ್. ಅಧಿಕಾರಿಯೊಬ್ಬರು, ಮಧ್ಯ ಪ್ರದೇಶದಲ್ಲಿ ಮಾಡಿರುವಂತೆ, ಸಚಿವಾಲಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವುದಕ್ಕೆ ಮೊದಲು, ಸರ್ಕಾರ ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟಂತಹ ಆಯೋಗ ಹಾಗೂ ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ಮೊದಲು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಬೇಕು,” ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: suvarna vidhana soudha-languishing- government – failed -relocate -departments.