ರಾಜ್ಯ ವಿಧಾನಸಭಾ ಚುನಾವಣೆ : ನಾಳೆ ರಾಜ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ವಿಜಯಪುರ,ಏಪ್ರಿಲ್,22,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಮುಗಿದಿದೆ.  ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಈ ನಡುವೆ ನಾಳೆ(23) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಲ ಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಬಸವೇಶ್ವರ ಜಯಂತಿ ಅಂಗವಾಗಿ ಜನ್ಮಭೂಮಿ ಹಾಗೂ ಐಕ್ಯ ಭೂಮಿಗೆ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದಾರೆ.  ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಏ.23 ರಂದು ಹೈದರಾಬಾದ್ ನಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ‌ಆಗಮಿಸಿ, ಅಲ್ಲಿಂದ ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಬಸವೇಶ್ವರರು ವಿಶ್ವದ ಪ್ರಥಮ ಸಂಸತ್ ರೂಪಿಸಿದರು. ಕಾರ್ಲ್ ಮಾರ್ಕ್ಸ್ ಗಿಂತ ಮೊದಲೇ ಕಾಯಕದ ಸ್ವಾಭಿಮಾನ ಎತ್ತಿ ಹಿಡಿದು, ದಾಸೋಹ ಪರಿಕಲ್ಪನೆ ನೀಡಿದ್ದೇ ಬಸವೇಶ್ವರರು. ಹೀಗಾಗಿ ಬಸವೇಶ್ವರ ಕುರಿತು ರಾಹುಲ್ ಗಾಂಧಿ ಪ್ರಭಾವಿತರಾಗಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರು ಭಾನುವಾರ ಕೂಡಲಸಂಗಮ ಬಸವ ಐಕ್ಯ ಮಂಟಪದಲ್ಲಿ ಬಸವೇಶ್ವರ ಐಕ್ಯಸ್ಥಳ, ಸಂಗಮೇಶ್ವರ ದರ್ಶನ‌ ಪಡೆಯಲಿದ್ದಾರೆ. ಬಳಿಕ ಸಂಜೆ 4ಕ್ಕೆ ವಿಜಯಪುರ ನಗರಕ್ಕೆ ಭೇಟಿ, ರೋಡ ಶೋ ನಡೆಸಲಿದ್ದಾರೆ. 4 ಗಂಟೆಗೆ ನಗರದಲ್ಲಿ ರೋಡ್  ಶೋ, ಛತ್ರಪತಿ ಶಿವಾಜಿ ಮಹಾರಾಜರ, ಮಹಾತ್ಮಾ ಗಾಂಧೀಜಿ, ಬಸವೇಶ್ವರ, ಕನಕದಾಸ ವೃತ್ತದ ಮಾರ್ಗವಾಗಿ ಬಂದು, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿಜಯಪುರ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

Key words: State-Assembly- Elections-Congress leader- Rahul Gandhi – state -tomorrow.