ಪ್ರಿಯಾಂಕಾ ಗಾಂಧಿ ಅವರ ಬಂಧನ ಖಂಡನೀಯ: ಈ ದೇಶದಲ್ಲಿ ಅನ್ನದಾತರಿಗೆ ರಕ್ಷಣೆ ಇಲ್ಲ- ಡಿ.ಕೆ ಶಿವಕುಮಾರ್  ವಾಗ್ದಾಳಿ.

ಬೆಂಗಳೂರು,ಅಕ್ಟೋಬರ್,4,2021(www.justkannada.in):  ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು ಸಾವನ್ನಪ್ಪಿದ್ದು,  ಈ ಘಟನೆಯ ಹಿನ್ನೆಲೆ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಘಟನಾ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಬಂಧನ ಮಾಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ಈ ಕುರಿತ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಉತ್ತರ ಪ್ರದೇಶದಲ್ಲಿ  ಹಿಂಸಾಚಾರ ವೇಳೆ ಮೃತಪಟ್ಟ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧನ ಮಾಡಿರುವುದು ಖಂಡನೀಯ, “ಪ್ರಿಯಾಂಕಾ ಗಾಂಧಿ ಅವರ ಬಂಧನ ಮಾಡಿರುವುದು ಹಿಟ್ಲರ್ ಸಂಸ್ಕೃತಿಯ ಪ್ರತೀಕ, ಖಂಡನೀಯ ಎಂದು ಕಿಡಿಕಾರಿದ್ದಾರೆ.

ಈ ದೇಶದಲ್ಲಿ ಅನ್ನದಾತರಿಗೆ ರಕ್ಷಣೆ ಇಲ್ಲ. ರಕ್ಷಕರೇ ಭಕ್ಷಕರಾಗಿದ್ದಾರೆ, ರಾಕ್ಷಸರಾಗಿದ್ದಾರೆ. ಇದು ರಾಮರಾಜ್ಯವೋ?! ರಾವಣ ರಾಜ್ಯವೋ? ಎಂದು ಪ್ರಶ್ನಿಸಿರುವ ಡಿ ಕೆ ಶಿವಕುಮಾರ್‌, ಇಡೀ ದೇಶದ ರೈತರು ಸಿಡಿದೆದ್ದಿದ್ದಾರೆ. ಮೃತ ರೈತರ ಮನೆಗೆ ಭೇಟಿ ನೀಡದಂತೆ ತಡೆಯಲಾಗಿದೆ.  ದೇಶದದಲ್ಲಿ ಪ್ರಜಾ ಪ್ರಭುತ್ವ ಇಲ್ಲ. ಸರ್ವಾಧಿಕಾರ ಇದೆ.   ಸರ್ವಾಧಿಕಾರ ನಡೆಯುತ್ತಿದೆ ಎನ್ನುವುದಕ್ಕೆ ಇದೇ ಉದಹಾರಣೆ ಎಂದು  ಹರಿಹಾಯ್ದರು.

Key words: Priyanka Gandhi- arrest –reprehensible-KPCC- President-DK Shivakumar