ಹಿಂದುತ್ವವಾದಿಗಳಿಂದ ಮಹಿಷಾ ದಸರಾ ವಿರೋಧ: ಮಹಿಷ ಪ್ರಾಧಿಕಾರ ರಚನೆಗೆ ಮನವಿ ಮಾಡುತ್ತೇವೆ-ಪ್ರೊ. ಮಹೇಶ್ ಚಂದ್ರಗುರು.

ಮೈಸೂರು,ಆಗಸ್ಟ್,17,2023(www.justkannada.in): ಹಿಂದುತ್ವವಾದಿಗಳು ಮಹಿಷಾ ದಸರಾ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಸಂಘ ಪರಿವಾರದವರು ಸೃಷ್ಟಿ ಮಾಡುವ ಸುಳ್ಳಿನ ಸರಮಾಲೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರೊ. ಮಹೇಶ್ ಚಂದ್ರಗುರು ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಹಿಷಾ ದಸರಾ ಆಚರಣೆ ಸಮಿತಿಯ ಸದಸ್ಯರಾದ ಮಾಜಿ ಮೇಯರ್ ಪುರುಷೋತ್ತಮ್, ಪ್ರೊಫೆಸರ್ ಮಹೇಶ್ ಚಂದ್ರಗುರು, ಪ್ರೊಫೆಸರ್ ಕೆ.ಎಸ್ ಭಗವಾನ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.

ಈ ವೇಳೆ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಮಹಿಷಾ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮಹಿಷಾ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗುಲ್ಬರ್ಗ, ಮೈಸೂರು, ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಇತರ ವಿವಿ ಗಳಲ್ಲಿ ಮಹಿಷಾ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಮಹಿಷ ಬೌದ್ಧನಾಗಿದ್ದಾನೆ‌. ಹೀಗಾಗಿ ಮಹಿಷ ಬೌದ್ಧ ದಸರಾವನ್ನು ಆಚರಿಸುತ್ತೇವೆ‌. ವಿರೋಧಿಸುವವರಿಗೆ ತಕ್ಕ ಉತ್ತರ ಕೊಡುತ್ತೇವೆ. ಸಂಸದ ಪ್ರತಾಪ್ ಸಿಂಹ ಕಟ್ಟರ್ ಹಿಂದುತ್ವವಾದಿ. ನಾವು ಮನವತಾ ವಾದಿಗಳು. ಮನವತಾವಾದಿಗಳಾಗಿರುವ ನಮ್ಮ ಮುಂದೆ ಕಟ್ಟರ್ ಹಿಂದುತ್ವ ವಾದಿ ಪ್ರತಾಪ್ ಸಿಂಹ ಆಟ ನಡೆಯುವುದಿಲ್ಲ ಎಂದು  ಪ್ರೊಫೆಸರ್ ಮಹೇಶ್ ಚಂದ್ರಗುರು ಹೇಳಿದರು.

ಸಂಸದ ಪ್ರತಾಪ್ ಸಿಂಹ ನನ್ನ ವಿದ್ಯಾರ್ಥಿ. ಆತ ತನ್ನ ತಪ್ಪನ್ನು ತಿದ್ದಿಕೊಂಡು ನಡೆಯಬೇಕು. ಆತನಿಗೆ ಕೆಡುಕು ಬಯಸುವುದಿಲ್ಲ, ಒಳ್ಳೆಯದಾಗಲಿ ಸರಿ ದಾರಿಯಲ್ಲಿ ನಡೆಯಲಿ ಎಂದು ಹಾರೈಸುತ್ತೇನೆಂದು ಪ್ರೊ. ಮಹೇಶ್ ಚಂದ್ರಗುರು ಹೇಳಿದರು.

ನಾವು ನೀಡುವ ಮಾಹಿತಿ ಸುಳ್ಳು ಎಂದು ಸಾಬೀತಾದ್ರೆ ಇನ್ನೆಂದೂ ಮಹಿಷಾ ದಸರಾ ಆಚರಣೆ ಮಾಡಲ್ಲ- ಮಾಜಿ ಮೇಯರ್ ಪುರುಷೋತ್ತಮ್

ಇದೇ ವೇಳೆ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್,  ಈ ಬಾರಿ ಮಹಿಷಾ ದಸರಾ ಆಚರಣೆಗೂ ಒಂದು ತಿಂಗಳು ಮೊದಲು ವಿಚಾರ ಸಂಕಿರಣ ಆಯೋಜಿಸಲಾಗುತ್ತದೆ. ಸದ್ಯದಲ್ಲೇ ಸ್ಥಳ ಹಾಗೂ ದಿನಾಂಕ ಘೋಷಣೆ ಮಾಡಲಾಗುವುದು. ದಸರಾ ವಿರುದ್ಧ, ಚಾಮುಂಡಿ ವಿರುದ್ಧ ಮಹಿಷಾ ದಸರಾ ಆಚರಣೆ ಮಾಡುತ್ತಿಲ್ಲ. ಮಹಿಷನ ಬಗ್ಗೆ ದೇಶದ ಉದ್ದಗಲಕ್ಕೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ವಿಚಾರ ಸಂಕಿರಣದಲ್ಲಿ ಎಲ್ಲ ವಿಚಾರಗಳನ್ನು ಮುಂದಿಡುತ್ತೇವೆ. ನಾವು ನೀಡುವ ಮಾಹಿತಿಗಳು ಸುಳ್ಳು ಎಂದು ಸಾಬೀತಾದರೆ ಇನ್ನೆಂದೂ ಮಹಿಷ ದಸರಾ ಆಚರಣೆ ಮಾಡುವುದಿಲ್ಲ. ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸುತ್ತಿರುವ ಸಂಸದ ಪ್ರತಾಪ್ ಸಿಂಹರ ರಾಜಕೀಯ ಭವಿಷ್ಯ 2024ರ ಲೋಕಸಭಾ ಚುನಾವಣೆಯಲ್ಲಿ ಕೊನೆಯಾಗಲಿದೆ ಎಂದು ಹೇಳಿದರು.

Key words: Opposition -Mahisha dasara- Prof. Mahesh Chandraguru-Purushotham-mysore