ಸಿಎಎಯನ್ನು ಹಿಂಪಡೆಯುವ ಮಾತೇ ಇಲ್ಲ-ಕೇಂದ್ರ ಗೃಹ ಸಚಿವ ಅಮಿತ್ ಶಾ.

ನವದೆಹಲಿ,ಮಾರ್ಚ್,14,2024(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ)ಯನ್ನ ಕೇಂದ್ರ ಸರ್ಕಾರ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಎಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಎಯನ್ನ ಇಡೀ ದೇಶದಲ್ಲಿ ಜಾರಿಗೆ ತಂದಿದೆ. ಆದರೆ ವಿರೋಧ ಪಕ್ಷಗಳು ಸಿಎಎ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿವೆ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ, ನಾವು ಸಿಎಎಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದರು.

ಸಿಎಎ ಮೂಲಕ ಮತಗಳನ್ನು ಪಡೆಯುವ ತಂತ್ರ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅಮಿತ್ ಶಾ, ಈ ರೀತಿ ಹೇಳುವುದು ಅವರ ಇತಿಹಾಸ, ಆದರೆ ಸಿಎಎ ಜಾರಿಗೆ ತಂದಿರುವುದು ಮೋದಿ ಇತಿಹಾಸ, ಮೋದಿಯವರ ಪ್ರತಿ ಭರವಸೆಯೂ ಈಡೇರಿದೆ ಎಂದಿದ್ದಾರೆ.

ಅಲ್ಪಸಂಖ್ಯಾತರು ಅಥವಾ ಯಾವುದೇ ವ್ಯಕ್ತಿ ಭಯಪಡುವ ಅಗತ್ಯವಿಲ್ಲ ಏಕೆಂದರೆ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಯಾವುದೇ ಅವಕಾಶವಿಲ್ಲ. ಸಿಎಎ ಹಿಂದೂಗಳು, ಬೌದ್ಧರು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪಾರ್ಸಿ ನಿರಾಶ್ರಿತರಿಗೆ ಹಕ್ಕು ಮತ್ತು ಪೌರತ್ವವನ್ನು ನೀಡಲು ಮಾತ್ರ ಎಂದು ಸ್ಪಷ್ಟನೆ ನೀಡಿದರು.

Key words: No -withdrawing -CAA-Central Home Minister-Amit Shah