ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಗೊಂದಲ ಕೊನೆಗೊಂಡಿದೆ, ಧೈರ್ಯದಿಂದ ಅರ್ಜಿ ಸಲ್ಲಿಸಿ: ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ

ಬೆಂಗಳೂರು, ಮೇ 12, 2019 (www.justkannada.in):ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) 2013–15ನೇ ಸಾಲಿನ 95 ಸಾವಿರ ವಿದ್ಯಾರ್ಥಿಗಳ ಪದವಿ ಮಾನ್ಯತೆಯ ಭವಿಷ್ಯ ರಾಜ್ಯ ಹೈಕೋರ್ಟ್‌ನ ತೀರ್ಪಿನಲ್ಲಿ ಅಡಗಿದೆ. ಯಾವುದೇ ತಪ್ಪು ಮಾಡಿರದ ವಿದ್ಯಾರ್ಥಿಗಳ ಪರವಾಗಿ ವಿ.ವಿ ನಿಂತಿದೆ. ಒಂದೆರಡು ತಿಂಗಳಲ್ಲಿ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ–

ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ಉತ್ತರವಿದು….

ಫೋನ್‌ ಕರೆ ಮಾಡಿದ ಬಹುತೇಕರು ಕೇಳಿದ ಪ್ರಶ್ನೆ ‘2013–14 ಹಾಗೂ 2014–15ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದರೂ ಅಂಕಪಟ್ಟಿ ಇನ್ನೂ ಬಂದಿಲ್ಲ, ಪದವಿಯ ಮಾನ್ಯತೆ ಸಿಕ್ಕಿಲ್ಲ. ಅದು ಯಾವಾಗ ಬರುತ್ತದೆ? ನಾವು ಏನು ತಪ್ಪು ಮಾಡಿದ್ದೇವೆ? ಇನ್ನಷ್ಟು ವಿಳಂಬವಾದರೆ ನಮ್ಮ ಜೀವನದ ಭವಿಷ್ಯ ಏನು ಎಂದು ಪ್ರಶ್ನಿಸಿದರು.

‘2013–15ನೇ ಸಾಲಿನಲ್ಲಿ 95 ಸಾವಿರ ವಿದ್ಯಾರ್ಥಿಗಳು ನಿಯಮದಂತೆ ಶಿಕ್ಷಣ ಪಡೆದು, ಪರೀಕ್ಷೆ ಎದುರಿಸಿದ್ದಾರೆ. ಯಾವುದೇ ತಾಂತ್ರಿಕ ಶಿಕ್ಷಣ ಪಡೆದಿಲ್ಲ. ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡು ನಡೆಸಲಾದ ಪದವಿ ಮತ್ತು ತಾಂತ್ರಿಕ ಕೋರ್ಸ್‌ಗಳು ಕಾನೂನು ಬಾಹಿರ ಎಂಬ ಕಾರಣಕ್ಕೆ ಯುಜಿಸಿ ಮಾನ್ಯತೆ ರದ್ದುಪಡಿಸಿತ್ತು. ತಾಂತ್ರಿಕ ಕೋರ್ಸ್‌ಗಳನ್ನು ನಡೆಸಲು ವಿ.ವಿಗೆ ಯಾವುದೇ ಅವಕಾಶಗಳು ಇರಲಿಲ್ಲ. ಆದರೂ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಸಮಸ್ಯೆಯ ಮೂಲ. ತಾಂತ್ರಿಕ ಕೋರ್ಸ್‌ಗಳ ಮಾನ್ಯತೆ ರದ್ದುಮಾಡುವುದರ ಜತೆಗೆ ವಿ.ವಿ ವ್ಯಾಪ್ತಿಯಲ್ಲಿದ್ದ ಸಾಮಾನ್ಯ ಪದವಿ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಮಾಡಿದ್ದರಿಂದ ಇಷ್ಟೆಲ್ಲ ಸಮಸ್ಯೆ ಎದುರಿಸಬೇಕಾಯಿತು. ಯುಜಿಸಿಗೆ ಇದನ್ನು ಮನವರಿಕೆ ಮಾಡುವ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ಕುಲಪತಿ ಸ್ಪಷ್ಟಪಡಿಸಿದರು.

‘ಯಾವುದೇ ತಪ್ಪು ಮಾಡಿರದ ನಮಗೆ ನ್ಯಾಯ ಒದಗಿಸಬೇಕು, ನಮ್ಮ ಅಂಕಪಟ್ಟಿ, ಪದವಿ ಪ್ರಮಾಣಪತ್ರ ನೀಡಬೇಕು’ ಎಂದು ಕೋರಿ ಕೆಲವು ವಿದ್ಯಾರ್ಥಿಗಳು ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದು ವಿಚಾರಣೆ ಹಂತಕ್ಕೂ ಬಂದಿದೆ. ಕೆಎಸ್ಒಯು ಸಹ ವಿದ್ಯಾರ್ಥಿಗಳಿಗೆ ಪೂರಕವಾಗಿ ಸ್ಪಂದಿಸಿದೆ. ಒಂದೆರಡು ತಿಂಗಳಲ್ಲಿ ತೀರ್ಪು ಹೊರಬೀಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಫ್ರಾಂಚೈಸಿಗಳ ಮೂಲಕ ಪದವಿ, ತಾಂತ್ರಿಕ ಪದವಿ ಪಡೆದವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ತಾಂತ್ರಿಕ ಶಿಕ್ಷಣ ನೀಡುವಲ್ಲಿ ಕೆಎಸ್‌ಒಯುನಲ್ಲಿ ಕೆಲವೊಂದು ತಪ್ಪು ನಿರ್ಧಾರಗಳಾಗಿವೆ. ಆಗಿದ್ದ ತಪ್ಪುಗಳನ್ನು ಸರಿಪಡಿಸಿ, ಯುಜಿಸಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮನವರಿಕೆ ಮಾಡಿಕೊಟ್ಟ ನಂತರ ಮತ್ತೆ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಹಾಗಾಗಿ 2018–19ನೇ ಸಾಲಿಗೆ ಪ್ರವೇಶ ನೀಡಲಾಗಿದೆ. ಮುಂದಿನ ವರ್ಷಗಳಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲಾಗುವುದು. ಕುಲಪತಿಯಾಗಿ ಬಂದ ನಂತರ ಇಡೀ ಸಮಯವನ್ನು ಮಾನ್ಯತೆ ಪಡೆದುಕೊಳ್ಳುವ ಪ್ರಯತ್ನಕ್ಕೆ ಮೀಸಲಿಡಬೇಕಾಯಿತು ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.

2018–19ನೇ ಸಾಲಿನಲ್ಲಿ ಅರ್ಜಿ ಆಹ್ವಾನಿಸಿದಾಗ ಭಾರಿ ಸ್ಪಂದನೆ ವ್ಯಕ್ತವಾಯಿತು. ಈ ವರ್ಷ 31 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಒಂದು ವಾರದಲ್ಲೇ 9 ಸಾವಿರಕ್ಕೂ ಅಧಿಕ ಮಂದಿ ವಿ.ವಿ ವೆಬ್‌ಸೈಟ್ ನೋಡಿದ್ದಾರೆ. ಅರ್ಜಿ ಸಲ್ಲಿಸಲು ಆಗಸ್ಟ್‌ 30ರ ವರೆಗೆ ಕಾಲಾವಕಾಶವಿದ್ದು, 50 ಸಾವಿರ ಮಂದಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಇನ್ನೂ ವಿ.ವಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ಶುಲ್ಕ ಕಡಿಮೆ: ಕೆಎಸ್‌ಯುಒ ನೀಡುವ ಪದವಿಗೂ ಇತರ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿಗೂ ಯಾವುದೇ ವ್ಯತ್ಯಾಸ ಇಲ್ಲ. ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ನೀಡಲಾಗುತ್ತಿದೆ. ಆದರೆ ಪಿಯು ಹಾಗೂ ಅದಕ್ಕೆ ಸಮಾನಾಂತರ ಶಿಕ್ಷಣ ನೀಡುವುದನ್ನು ಬಹಳ ಹಿಂದೆಯೇ ನಿಲ್ಲಿಸಲಾಗಿದೆ. ಇತರ ವಿ.ವಿಗಳಿಗೆ ಹೋಲಿಸಿದರೆ ಕೆಎಸ್ಒಯು ಶುಲ್ಕ ಕಡಿಮೆ ಇದೆ. ಅದೆಷ್ಟೋ ಮಂದಿಯ ಬಡ್ತಿ, ಉನ್ನತ ವ್ಯಾಸಂಗಕ್ಕೆ ವಿ.ವಿ ನೆರವಾಗಿದೆ. ಇದು ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಶಿವಲಿಂಗಯ್ಯ ವಿವರಿಸಿದರು.

ಯುಜಿಸಿ ಮಾನ್ಯತೆ ರದ್ದುಪಡಿಸುವಾಗ 2015ರ ನಂತರದ ಪ್ರವೇಶಕ್ಕೆ ಮಾನ್ಯತೆ ರದ್ದುಪಡಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ 2013ರಿಂದ ಪೂರ್ವಾನ್ವಯವಾಗುವಂತೆ ರದ್ದುಪಡಿಸಿ ಆದೇಶಿಸಿತ್ತು. ಆ ವೇಳೆಗೆ ಪದವಿ ಪಡೆದಿದ್ದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು. ಯುಜಿಸಿ ಮಾನ್ಯತೆಯ ಗೊಂದಲ ನಿವಾರಣೆಯಾಗದೆ ರಾಜ್ಯಪಾಲರು ಸಹ ಪದವಿ ಪ್ರದಾನ ಮಾಡುವಂ
ತಿಲ್ಲ. ಹೀಗಾಗಿ ನ್ಯಾಯಾಲ ಯದಿಂದ ಬರುವ ತೀರ್ಪು ನಿರ್ಣಾಯಕವಾಗಲಿದೆ ಎಂದು ಹೇಳಿದರು.

  • ಕೃಪೆ: ಪ್ರಜಾವಾಣಿ