ಒಡೆಯರ್ ಅವರಿಗೆ ಸೇರಿದ್ದ 10 ಎಕರೆ ಖಾಲಿ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಪ್ರಕರಣ: 8 ಮಂದಿಗೆ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು:ಮೇ-4:(www.justkannada.in) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸೇರಿದ್ದ 10 ಎಕರೆ ಖಾಲಿ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿ 8 ಮಂದಿಗೆ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ವಿಶೇಷ ನ್ಯಾಯಾಲಯ ಆದೇಶ ರದ್ದುಪಡಿಸುವಂತೆ ಕೋರಿ ಮುಂಬೈನ ಬಿಲ್ಡರ್ ಜಗದೀಪ್ ಆರ್.ತದಣಿ, ಐಟಿ ಇಲಾಖೆ ಇನ್​ಸ್ಪೆಕ್ಟರ್ ಸಿ. ಸುಬ್ಬರಾಯನ್ ಸೇರಿ 8 ಮಂದಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್ ಅವರಿದ್ದ ಪೀಠ, ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಪ್ರಕರಣದ ಮೇಲ್ಮನವಿದಾರರು ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಭ್ರಷ್ಟಾಚಾರ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ವ್ಯವಸ್ಥೆಗೆ ವಂಚನೆ ಎಸಗಿದ್ದಾರೆ. ಆ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಅಪರಾಧದಲ್ಲಿ ಎಲ್ಲ ಮೇಲ್ಮನವಿದಾರರೂ ಸಮಾನ ಭಾಗಿಗಳಾಗಿದ್ದಾರೆ. ಅವರ ವಿರುದ್ಧದ ಆರೋಪಗಳನ್ನು ಪ್ರಾಸಿಕ್ಯೂಷನ್ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಿದೆ. ಹೀಗಾಗಿ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಸೂಕ್ತವಾಗಿದ್ದು, ಅದರಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 7,51,05,327 ರೂ. ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ 1995ರಲ್ಲಿ ಐಟಿ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ತೆರಿಗೆ ಪಾವತಿಸದ ಕಾರಣಕ್ಕೆ ಮೈಸೂರಿನ ಪ್ರಾಣಿ ಸಂಗ್ರಹಾಲಯದ ಸಮೀಪದ ಸರ್ವೆ ನಂ. 4ರಲ್ಲಿ ಒಡೆಯರ್ ಅವರಿಗೆ ಸೇರಿದ 10 ಎಕರೆ ಜಮೀನನ್ನು 1995ರ ಅ.30ರಂದು ಹರಾಜು ಮಾಡಿ ಮುಂಬೈನ ರಿಯಲ್ ಎಸ್ಟೇಟ್ ಉದ್ಯಮಿ ಜಗದೀಪ್ ಆರ್.ತದಣಿ ಅವರಿಗೆ ಮಾರಾಟ ಮಾಡಿದ್ದರು. ಈ ಹರಾಜು ಪ್ರಕ್ರಿಯೆ ಸಂಬಂಧ ಕುಮಾರ್ ಎಂಬುವರು ಸಿಬಿಐಗೆ ದೂರು ನೀಡಿ, ಐಟಿ ರಿಕವರಿ ಅಧಿಕಾರಿ ಶಿವಣ್ಣ, ಇನ್​ಸ್ಪೆಕ್ಟರ್ ಸಿ. ಸುಬ್ಬರಾಯನ್, ಗುಮಸ್ತರಾದ ಕೆ.ರಾಜಣ್ಣ ಹಾಗೂ ಬಿ.ಎನ್. ರಾಜಣ್ಣ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಮೈಸೂರಿನ ಹೋಟೆಲ್​ನಲ್ಲಿ ನಕಲಿ ಹರಾಜು ಪ್ರಕ್ರಿಯೆ ನಡೆಸಿದ್ದರು.

ಒಡೆಯರ್ ಅವರಿಗೆ ಸೇರಿದ್ದ 10 ಎಕರೆ ಖಾಲಿ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಪ್ರಕರಣ: 8 ಮಂದಿಗೆ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
8 people were sentenced to jail: highcourt